ಹೊಸದಿಲ್ಲಿ: ಅಮೆರಿಕವು ಭಾರತದ ಉತ್ಪನ್ನಗಳ ಮೇಲೆ ಹೇರಿರುವ ಶೇ. 25ರ ಹೆಚ್ಚುವರಿ ಸುಂಕವು ಬುಧವಾರದಿಂದ ಜಾರಿಗೆ ಬರಲಿದೆ.
ಅದರಂತೆ ವಿನಾಯಿತಿ ಇರುವ ಕೆಲವು ಸರಕುಗಳನ್ನು ಹೊರತುಪಡಿಸಿ ಅಮೆರಿಕದ ಮಾರುಕಟ್ಟೆಯನ್ನು ಪ್ರವೇಶಿಸುವ ಭಾರತದ ಇತರ ಉತ್ಪನ್ನ ಗಳ ಸುಂಕ ಬುಧವಾರದಿಂದ ಶೇ. 50ಕ್ಕೆ ಏರಲಿದೆ. ಅಮೆರಿಕಕ್ಕೆ ಭಾರತದಿಂದ ರಫ್ತಾಗುವ 4.22 ಲಕ್ಷ ಕೋಟಿ ರೂ. ಮೌಲ್ಯದ ಸರಕುಗಳ ಮೇಲೆ ಇದು ಪರಿಣಾಮ ಬೀರಲಿದೆ.
ಆರಂಭದಲ್ಲಿ ಆ. 7ರಂದು ಟ್ರಂಪ್ ಆಡಳಿತವು ಭಾರತದ ಮೇಲೆ ಶೇ. 25 ಪ್ರತಿಸುಂಕ ವಿಧಿಸಿತ್ತು. ಅನಂತರ ರಷ್ಯಾ ಜತೆ ತೈಲ ವ್ಯಾಪಾರ ಮುಂದುವರಿಸಿದ್ದಕ್ಕೆ ದಂಡದ ರೂಪದಲ್ಲಿ ಆ. 27ರಿಂದ ಅನ್ವಯವಾಗುವಂತೆ ಹೆಚ್ಚುವರಿ ಶೇ. 25 ಸುಂಕ ಘೋಷಿಸಿತ್ತು. ಆ. 17ರ ಮುಂಜಾನೆ 12.01 ಗಂಟೆ (ಅಮೆರಿಕದ ಕಾಲಮಾನ)ಯ ಒಳಗಾಗಿ ನೌಕೆಗೆ ಲೋಡ್ ಆಗಿರುವಂಥ ಅಥವಾ ಅಮೆರಿಕಕ್ಕೆ ಪ್ರಯಾಣ ಬೆಳೆಸಿರುವಂಥ ಸರಕುಗಳು ಈ ಶೇ. 50ರ ಸುಂಕದಿಂದ ವಿನಾಯಿತಿ ಪಡೆಯಲಿವೆ.
ಯಾವ ಸರಕುಗಳಿಗೆ ಸಿಗಲಿದೆ ವಿನಾಯಿತಿ?
ಔಷಧ, ಇಂಧನ ಉತ್ಪನ್ನ, ಎಲೆಕ್ಟ್ರಾನಿಕ್ ಉತ್ಪನ್ನ, ಪೆಟ್ರೋಲಿಯಂ ಉತ್ಪನ್ನಗಳಿಗೆ ಸುಂಕ ಇಲ್ಲ.
ಅಲ್ಯುಮಿನಿಯಂ, ಉಕ್ಕು ಮತ್ತು ತಾಮ್ರದಂಥ ಕೆಲವು ಲೋಹ ಗಳ ಮೇಲೆ ಶೇ. 25 ಸುಂಕ ಇರಲಿದೆ.
ಯಾವೆಲ್ಲ ಸರಕುಗಳ ಮೇಲೆ ಪರಿಣಾಮ?
ಜವುಳಿ, ಆಭರಣಗಳು ಮತ್ತು ಹರಳುಗಳು, ಸಿಗಡಿ, ಚರ್ಮೋತ್ಪನ್ನಗಳು, ಪಾದರಕ್ಷೆ ಗಳು, ರಾಸಾಯನಿಕಗಳು, ಎಲೆಕ್ಟಿಕಲ್ ಮತ್ತು ಮೆಕಾನಿಕಲ್ ಯಂತ್ರಗಳು.
7.54 ಲಕ್ಷ ಕೋಟಿ ರೂ.
ಭಾರತದಿಂದ ಅಮೆರಿಕಕ್ಕೆ ಒಟ್ಟಾರೆ ರಫ್ತಾಗುವ ಸರಕುಗಳ ಮೌಲ್ಯ.
4.22 ಲಕ್ಷ ಕೋಟಿ ರೂ.
ಶೇ.50 ಸುಂಕದಿಂದ ಇಷ್ಟು ಮೌಲ್ಯದ ಸರಕುಗಳ ಮೇಲೆ ಪರಿಣಾಮ.












