ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಧುವನಹಳ್ಳಿ ಗ್ರಾಮದ ಒಂದು ಮನೆಯಲ್ಲಿ ಶೋಕ ಆವರಿಸಿದೆ. ಗೌರಿ ಗಣೇಶ ಹಬ್ಬಕ್ಕೆ ತನ್ನ ತವರು ಮನೆಯವರು ಕರೆಯಲಿಲ್ಲ ಎನ್ನುವ ಕಾರಣಕ್ಕೆ ಮನನೊಂದಿದ್ದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಜೀವನದಲ್ಲಿ ಭಾರೀ ಜಿಗುಪ್ಸೆಗೊಂಡಿದ್ದ ಗೃಹಿಣಿ, ಹಬ್ಬಕ್ಕೆ ತವರು ಮನೆಗೆ ಹೋಗಿ ಸಂಭ್ರಮ ಪಡುವ ಖುಷಿಯಲ್ಲಿದ್ದಳು. ಆದರೆ, ತವರು ಮನೆಯಿಂದ ಯಾವುದೇ ಆಹ್ವಾನ ಬರದ ಕಾರಣ ಮನನೊಂದು ಈ ಕೃತ್ಯ ಎಸಗಿದ್ದಾಳೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು 26 ವರ್ಷದ ರಶ್ಮಿ ಎಂದು ಗುರುತಿಸಲಾಗಿದೆ.
ಮಧುವನಹಳ್ಳಿ ಗ್ರಾಮದ ಸಿದ್ದರಾಜು ಅವರನ್ನು ಈಕೆ ವಿವಾಹವಾಗಿದ್ದಳು. ಈಕೆಯ ತಂದೆ, ತಾಯಿ ಹಾಗೂ ಅಣ್ಣ ಈಗಾಗಲೇ ಸಾವನ್ನಪ್ಪಿದ್ದಾರೆ. ತವರಿಗೆ ಕರೆದು ಅರಿಶಿನ-ಕುಂಕುಮ ಕೊಡಲು ಯಾರೂ ಇಲ್ಲ ಎನ್ನುವ ಕಾರಣಕ್ಕೆ ಆಕೆ ಜೀವನದಲ್ಲಿ ಜಿಗುಪ್ಸೆಗೊಂಡಿದ್ದಳು. ಇದರಿಂದಾಗಿ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












