ಫುಡ್ ಡೆಲಿವರಿಗೂ ಬಂತು‌ 15 ಕಿ.ಮೀ ವೇಗದಲ್ಲಿ ಸಂಚರಿಸುವ ರೋಬೋ ಶ್ವಾನ!

ರೋಬಾಟ್​ಗಳು ಈಗ ಎಲ್ಲಾ ಕ್ಷೇತ್ರಗಳಿಗೂ ಕಾಲಿಡುತ್ತಿದ್ದು, ಹೊಸ ಪ್ರಯೋಗವೊಂದರಲ್ಲಿ ರೋಬೋ ಶ್ವಾನವನ್ನು ಬಳಸಿ ಫುಡ್ ಡೆಲಿವರಿ ಮಾಡುವಲ್ಲಿ ಆಹಾರ ವಿತರಣಾ ಕಂಪನಿ ಯಶಸ್ವಿಯಾಗಿದೆ.

ಡಚ್ ಮೂಲದ ಬಹುರಾಷ್ಟ್ರೀಯ ಆಹಾರ ವಿತರಣಾ ಕಂಪನಿ ಜಸ್ಟ್ ಈಟ್ ಟೇಕ್​ಅವೇ ಡಾಟ್ ಕಾಮ್ ಸ್ವಿಟ್ಜರ್​ಲ್ಯಾಂಡ್​ನ ರೋಬೋಟಿಕ್ಸ್ ಕಂಪನಿಯ ಸಹಯೋಗದೊಂದಿಗೆ ಸ್ವಿಟ್ಜರ್​ಲ್ಯಾಂಡ್​ನ ಜ್ಯೂರಿಚ್​ನಲ್ಲಿ ಪ್ರಾಯೋಗಿಕವಾಗಿ ಫುಡ್ ಡೆಲಿವರಿ ಆರಂಭಿಸಿದೆ.

ಕೃತಕ ಬುದ್ಧಿಮತ್ತೆಯನ್ನು ಆಧರಿಸಿ ಕಾರ್ಯನಿರ್ವಹಿಸುವ ಈ ರೋಬೋ ಶ್ವಾನಗಳ ಕಾಲುಗಳಿಗೆ ಚಕ್ರ ಅಳವಡಿಸಲಾಗಿದ್ದು, ಇವು ಗಂಟೆಗೆ 15 ಕಿ.ಮೀ. ವೇಗದಲ್ಲಿ ಸಂಚರಿಸುತ್ತವೆ ಮತ್ತು ಮೆಟ್ಟಿಲುಗಳನ್ನೂ ಹತ್ತುತ್ತವೆ ಮತ್ತು ಇಳಿಯುತ್ತವೆ. ಎಐ ತಂತ್ರಜ್ಞಾನದಿಂದ ತನ್ನ ದಾರಿಯಲ್ಲಿರುವ ತಡೆತಡೆಗಳನ್ನು ಗುರುತಿಸಿ ಸುರಕ್ಷಿತವಾಗಿ ತನ್ನ ಗುರಿಯನ್ನು ತಲುಪುತ್ತವೆ.

ಈ ರೋಬೋ ಶ್ವಾನಗಳು ಮಳೆ, ಹಿಮ, ಬಿಸಿಲು ಸೇರಿದಂತೆ ಎಲ್ಲಾ ವಿಧದ ಹವಾಮಾನದಲ್ಲೂ ಕಾರ್ಯನಿರ್ವಹಿಸುತ್ತವೆ. ಕಮಾಂಡ್ ಸೆಂಟರ್​ನಿಂದ ರೋಬೋಗಳ ಮೇಲೆ ನಿಗಾ ಇರಿಸಬಹುದು ಎಂದು ಕಂಪನಿ ತಿಳಿಸಿದೆ.