ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತ ಪ್ರಕರಣ ಇದೀಗ ಮಹತ್ವದ ತಿರುವು ಪಡೆದಿದೆ. ಬುರುಡೆ ಹಿಡಿದುಕೊಂಡು ಬಂದು ದೂರು ನೀಡಿದ್ದ ಅನಾಮಿಕ ದೂರುದಾರನನ್ನು ಇದೀಗ ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದಾರೆ.
ಶನಿವಾರ (ಆ.23) ದೂರುದಾರ ಮಾಸ್ಕ್‌ಮ್ಯಾನ್ (ಸಿ.ಎನ್.ಚಿನ್ನಯ್ಯ) ನನ್ನು ಎಸ್‌ಐಟಿ ಅಧಿಕಾರಿಗಳು ಬಂಧನಕ್ಕೆ ಒಳಪಡಿಸಿದ್ದಾರೆ. ಬೆಳಗ್ಗೆ ವೈದ್ಯಕೀಯ ತಪಾಸಣೆಯ ಬಳಿಕ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ಜೆಎಂಎಫ್‌ಎಸ್ ಕೋರ್ಟ್‌ಗೆ ಹಾಜರು ಪಡಿಸಿದ್ದಾರೆ. ಅಲ್ಲಿ ಆತನನ್ನು 10 ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ ನೀಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಅಧಿಕಾರಿಗಳು ಶುಕ್ರವಾರ (ಆ.22) ದೂರುದಾರ ಮತ್ತು ಈ ಹಿಂದೆ ಅನಾಥ ಶವಗಳ ಪೋಸ್ಟ್ ಮಾರ್ಟಂ ಮಾಡಿದ್ದ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದರು. ಇದರ ಮುಂದುವರಿದ ಭಾಗವಾಗಿ ಶನಿವಾರ ಪ್ರಮುಖ ದೂರುದಾರ ಮಾಸ್ಕ್ ಮ್ಯಾನ್ ನನ್ನು ಬಂಧಿಸಿದ್ದಾರೆ. ದೂರುದಾರನ ಗುರುತು ಬಹಿರಂಗವಾಗಿದ್ದು, ಮಂಡ್ಯ ಜಿಲ್ಲೆಯ ಸಿ.ಎನ್.ಚಿನ್ನಯ್ಯ ಎಂಬ ಹೆಸರಿನ ಈ ವ್ಯಕ್ತಿ ದೂರು ನೀಡಿದಾತ ಎನ್ನಲಾಗಿದೆ.












