ಉಡುಪಿ: ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿ ಸೌಜನ್ಯ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬೆಳ್ತಂಗಡಿಯ ತಿಮರೋಡಿಯಲ್ಲಿ ವಶಕ್ಕೆ ಪಡೆದು, ಬಿಗಿ ಬಂದೋಬಸ್ತ್ ನಲ್ಲಿ ಗುರುವಾರ ಮಧ್ಯಾಹ್ನ ಬ್ರಹ್ಮಾವರ ಠಾಣೆಗೆ ಕರೆತರಲಾಯಿತು.
ಖಾಸಗಿ ವಾಹನದಲ್ಲಿ ಪೊಲೀಸ್ ಬಂದೋಬಸ್ತ್‌ನಲ್ಲಿ ಬ್ರಹ್ಮಾವರ ಠಾಣೆ ತಲುಪಿದ ತಿಮರೋಡಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ತಿಮ್ಮರೋಡಿ ಜತೆ ಗಿರೀಶ್ ಮಟ್ಟಣ್ಣನವರ್ ಆಗಮಿಸಿದ್ದು, ಠಾಣೆಗೆ ಆಗಮಿಸುವ ಮುನ್ನವೇ ಮಹೇಶ್ ಶೆಟ್ಟಿ ಪರ ವಕೀಲರು ಠಾಣೆಯಲ್ಲಿದ್ದರು.
ಮಾತಿನ ಚಕಮಕಿ:
ಬ್ರಹ್ಮಾವರ ಪೊಲೀಸ್ ಠಾಣೆಯ ಮುಂಭಾಗ ಸೌಜನ್ಯ ಪರ ಹೋರಾಟಗಾರ ದಿನೇಶ್ ಗಾಣಿಗ, ರಮೇಶ್ ಮೆಂಡನ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಯಿತು. ಪೊಲೀಸ್ ಠಾಣೆ ಒಳಪ್ರವೇಶಕ್ಕೆ ಮುಂದಾದ ಸೌಜನ್ಯ ಪರ ಹೋರಾಟಗಾರರನ್ನು ಪೊಲೀಸರು ಬ್ಯಾರಿಗೇಡ್ ಮುಂಭಾಗದಲ್ಲಿ ತಡೆದರು. ಈ ವೇಳೆ ತೀವ್ರ ಮಾತಿನ ಚಕಮಕಿ ಉಂಟಾಯಿತು.
ತಿಮರೋಡಿ ಪರ ವಕೀಲ ವಿಜಯ ವಾಸು ಪೂಜಾರಿ ಅವರನ್ನು ಪೊಲೀಸರು ತಡೆದು ಠಾಣೆಯ ಒಳಪ್ರವೇಶಿದಂತೆ ತಡೆದರು.
ಈ ವೇಳೆಯೂ ವಕೀಲರು ಹಾಗೂ ಪೊಲೀಸರ ಮಧ್ಯೆ ಮಾತಿನಚಕಮಕಿ ಉಂಟಾಯಿತು.
ಎಎಸ್ಪಿ ಹರ್ಷಪ್ರಿಯಂವದ, ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಸಹಿತ ಹಿರಿಯ ಅಧಿಕಾರಿಗಳು ಹಾಜರಿದ್ದರು.












