ಧರ್ಮಸ್ಥಳ ವಿರುದ್ಧ ಷಡ್ಯಂತ್ರ; ಆಗಸ್ಟ್​ ತಿಂಗಳಾಂತ್ಯಕ್ಕೆ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ- ಕೆ. ರಘುಪತಿ ಭಟ್

ಉಡುಪಿ: ಧರ್ಮಸ್ಥಳ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಹೀಗಾಗಿ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಗಸ್ಟ್​ ತಿಂಗಳಾಂತ್ಯಕ್ಕೆ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಪ್ರತಿಭಟನಾ ಸಭೆ ಆಯೋಜಿಸಲಾಗುವುದು ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್​ ತಿಳಿಸಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್​ಐಟಿ ತನಿಖೆ ನಡೆದಿರುವುದು ಬಹಳ ಒಳ್ಳೆಯದಾಗಿದೆ. ಅನ್ವೇಷಣೆಯಿಂದ ಸಂಶಯಗಳಿಗೆ ತೆರೆಬಿದ್ದಿದೆ ಎಂದರು.
ಧರ್ಮಸ್ಥಳ ಧಾರ್ಮಿಕ ಸಂಸ್ಥೆಯಾಗಿ ಆದಾಯವನ್ನು ವ್ಯವಸ್ಥಿತವಾಗಿ ವಿನಿಯೋಗಿಸುತ್ತಿದೆ. ಅನೇಕ ಧಾರ್ಮಿಕ ಕೇಂದ್ರಗಳ ಜೀಣೋರ್ದ್ಧಾರಕ್ಕೆ 1 ಲಕ್ಷದಿಂದ 1 ಕೋಟಿ ರೂ. ವರೆಗೆ ಅನುದಾನ ಬಂದಿದೆ. ತಳಮಟ್ಟದಲ್ಲಿ ಜನರಿಗೆ ಸಹಾಯ ಮಾಡಲಾಗುತ್ತಿದೆ. ಹೀಗಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿ ಕೂಡ ಧ್ವನಿ ಎತ್ತುವುದು ಅನಿವಾರ್ಯವಾಗಿದೆ ಎಂದು ಹೇಳಿದರು.