ಕಳೆದ ವಾರವಷ್ಟೇ ಹರಕೆ ಹೊತ್ತಿದ್ದ ತಾಯಿ; ನಟಿ ರಕ್ಷಿತಾ ಪ್ರೇಮ್ ಕಾಪು ಮಾರಿಯಮ್ಮ ಕ್ಷೇತ್ರಕ್ಕೆ ಅನಿರೀಕ್ಷಿತ ಭೇಟಿ

ಉಡುಪಿ: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ತಾಣ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಈಗಾಗಲೇ ಹಲವಾರು ಕಾರಣಿಕಗಳಿಗೆ ಖ್ಯಾತಿಯಾಗಿದ್ದು, ನಟ – ನಟಿಯರು, ನ್ಯಾಯಾಧೀಶರು, ಅಧಿಕಾರಿಗಳು, ರಾಜಕೀಯ ನೇತಾರರು ಸೇರಿದಂತೆ ಹಲವಾರು ಗಣ್ಯರು ನಿತ್ಯ ಭೇಟಿ ನೀಡುತ್ತಿದ್ದು, ಬಹಳ ಕಾರಣಿಕದ ಕ್ಷೇತ್ರವಾಗಿ ಗುರುತಿಸಿಕೊಂಡಿದೆ.

ಇಂದು ಕಟೀಲು ದೇವಸ್ಥಾನಕ್ಕೆ ಆಗಮಿಸಿದ್ದ ನಟಿ ರಕ್ಷಿತಾ ಪ್ರೇಮ್ ಅವರು ಕಾಪುವಿಗೆ ಆಗಮಿಸಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರ್ಶನ ಪಡೆದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಅವರು ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಸಮ್ಮುಖದಲ್ಲಿ ಗೌರವಿಸಿ ಅಮ್ಮನ ಅನುಗ್ರಹ ಪ್ರಸಾದ ನೀಡಿದರು.ರಕ್ಷಿತಾ ಪ್ರೇಮ್ ಅನ್ನದಾನ ಸೇವೆಯನ್ನು ನೀಡಿದರು ನಂತರ ಇಷ್ಟಾರ್ಥ ಸಿದ್ಧಿಗಾಗಿ ನೆರವೇರುವ ಘಂಟಾನಾದ ಸೇವೆಯನ್ನು ಮಾಡಿದರು.

ಮಾಧ್ಯಮದೊಂದಿಗೆ ಮಾತನಾಡಿದ ಅವರು ಕಳೆದ ವಾರವಷ್ಟೇ ನನ್ನ ತಾಯಿ ಇಲ್ಲಿಗೆ ಬಂದು ಹರಕೆ ಹೊತ್ತುಕೊಂಡಿದ್ದರು, ನಾನು ಕೂಡಾ ಬರಬೇಕೆಂದು ಅಂದುಕೊಂಡಿದ್ದೆ, ಆದರೆ ಅಮ್ಮ ನನ್ನನ್ನು ಇಷ್ಟು ಬೇಗ ಕರೆಸಿಕೊಳ್ಳುತ್ತಾಳೆ ಅಂದುಕೊಂಡಿರಲಿಲ್ಲ ಅಂದರು, ದೇವಸ್ಥಾನ ಬಹಳ ಸುಂದರವಾಗಿ ಮೂಡಿಬಂದಿದೆ ಎಂದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ, ಘಂಟಾನಾದ ಸೇವಾ ಸಮಿತಿಯ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಆರ್. ಪಾಲನ್, ರವೀಂದ್ರ ಮಲ್ಲಾರ್, ಚರಿತ ದೇವಾಡಿಗ, ಪ್ರಚಾರ ಸಮಿತಿಯ ಸಂಚಾಲಕ ಜಯರಾಮ್ ಆಚಾರ್ಯ ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.