ಆ.24ರಂದು “ಸಿಂಗಾರ ಸಿರಿ” ಮದುಮಗಳ ಶೃಂಗಾರದಲ್ಲಿ ಸೌಂದರ್ಯ ತಜ್ಞೆಯರ ಕೌಶಲಗಳ ಅನಾವರಣ ಕಾರ್ಯಕ್ರಮ

ಉಡುಪಿ: ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘ ಉಡುಪಿ ಇದರ ಆಶ್ರಯದಲ್ಲಿ ವಿಶ್ವ ಗೀತಾ ಪರ್ಯಾಯದ ಪ್ರಯುಕ್ತ “ಸಿಂಗಾರ ಸಿರಿ” ಮದುಮಗಳ ಶೃಂಗಾರದಲ್ಲಿ ಸೌಂದರ್ಯ ತಜ್ಞೆಯರ ಕೌಶಲಗಳ ಅನಾವರಣ ಕಾರ್ಯಕ್ರಮವನ್ನು ಇದೇ ಆ.24ರಂದು ಉಡುಪಿ ಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘದ ಉಡುಪಿ ಜಿಲ್ಲಾಧ್ಯಕ್ಷೆ ನಂದಾ ಶೆಟ್ಟಿ ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಇದು ಕರಾವಳಿ ಕರ್ನಾಟಕದಲ್ಲಿಯೇ ಪ್ರಪ್ರಥಮ ಪ್ರದರ್ಶನವಾಗಿದ್ದು, ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 9.30ಕ್ಕೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.

ಭಾರತ ದೇಶದ ವಿವಿಧ ರೀತಿಯ ಮದುಮಗಳ ಶೃಂಗಾರವನ್ನು ನೂರು ಮಂದಿ ಪಾರ್ಲರ್ ನವರು ಪ್ರದರ್ಶನ ಮಾಡಿ ತೋರಿಸಲಿದ್ದಾರೆ. ಬೆಳಿಗ್ಗೆ 10ಗಂಟೆಯಿಂದ ಆರಂಭಗೊಂಡು ಸಂಜೆ 4ಗಂಟೆಯರೆಗೆ ಈ ಪ್ರದರ್ಶನ ನಡೆಯಲಿದೆ. ಇದರಲ್ಲಿ ಜಿಲ್ಲೆಯ ಬೈಂದೂರು, ಕುಂದಾಪುರ, ಕಾರ್ಕಳ, ಬ್ರಹ್ಮಾವರ, ಉಡುಪಿ, ಕಾಪು ಹಾಗೂ ಕಾರ್ಕಳ ವಲಯದಿಂದ 100ಕ್ಕೂ ಅಧಿಕ ಮಂದಿ ಪಾರ್ಲರ್ ನವರು ಭಾಗವಹಿಸಲಿದ್ದಾರೆ. ಅಲ್ಲದೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು‌ ತಿಳಿಸಿದರು.

ಮನೆಯಲ್ಲೇ ಬ್ಯೂಟಿಷಿಯನ್ ವೃತ್ತಿ ನಡೆಸುವವರ ವಿರುದ್ಧ ಕ್ರಮಕೈಗೊಳ್ಳಿ:
ಕೆಲವು ಮಂದಿ ಮನೆಯಲ್ಲೆ ಕುಳಿತುಕೊಂಡು ಬ್ಯೂಟಿಷಿಯನ್ ವೃತ್ತಿ ಮಾಡುತ್ತಿದ್ದಾರೆ. ಅನ್ ಲೈನ್ ಮೂಲಕ ಬುಕ್ ಮಾಡಿಕೊಂಡು ಗ್ರಾಹಕರ ಮನೆಗೆ ತೆರಳಿ ಮೇಕಪ್ ಮಾಡಿ ಹೋಗುತ್ತಿದ್ದಾರೆ‌‌. ಅವರಿಗೆ ಯಾವುದೇ ನಿಬಂಧನೆಗಳಿಲ್ಲ‌. ಆದರೆ, ಶಾಪ್ ಬಾಡಿಗೆ, ಪರವಾನಿಗೆ ತೆರಿಗೆ, ಕಸ ವಿಲೇವಾರಿಗೆ ಹಣ ಪಾವತಿಸಿಕೊಂಡು ಬಹಳ ಕಷ್ಟದಲ್ಲಿ ಪಾರ್ಲರ್ ನಡೆಸಿಕೊಂಡು ಹೋಗುವವರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಪಾರ್ಲರ್ ನವರಿಗೆ ಅವಕಾಶಗಳು ಕಡಿಮೆ ಆಗುತ್ತಿದೆ. ಹೀಗಾಗಿ ಮನೆಯಲ್ಲೇ ಕುಳಿತುಕೊಂಡು ಬ್ಯೂಟಿಷಿಯನ್ ವೃತ್ತಿ ಮಾಡುವವರ ವಿರುದ್ಧ ಸರಕಾರ ಕ್ರಮಕ್ಕೆ ಮುಂದಾಗಬೇಕು. ಇಲ್ಲದಿದ್ದರೆ ನಾವು ಯಾವುದೇ ತೆರಿಗೆಯನ್ನು ಪಾವತಿಸುವುದಿಲ್ಲ ಎಂದು ಅಖಿಲ ಕರ್ನಾಟಕ ಮಹಿಳಾ ಸೌಂದರ್ಯ ತಜ್ಞೆಯರ ಸಂಘ ಆಕ್ರೋಶ ಹೊರಹಾಕಿದೆ.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಸಂಧ್ಯಾ ದಿನೇಶ್, ಜಿಲ್ಲಾ ಕೋಶಾಧಿಕಾರಿ ಗೀತಾ ದಯಾನಂದ, ಸ್ಥಾಪಕ ಅಧ್ಯಕ್ಷೆ ಮರಿಯಾ ಹೆರಾಲ್ಡ್, ಸ್ಥಾಪಕ ಕಾರ್ಯದರ್ಶಿ ವೇದ ಸುವರ್ಣ ಉಪಸ್ಥಿತರಿದ್ದರು.