-ವಿಶೇಷ ಬರಹ
ಧರ್ಮಸ್ಥಳ ಅಸಹಜ ಶವಗಳನ್ನು ಹೂತು ಹಾಕಲಾಗಿದೆ ಎನ್ನುವ ದೂರಿನ ಕುರಿತು ಸರಕಾರ ಎಸ್ ಐಟಿ ರಚನೆ ಮಾಡಿ ತನಿಖೆ ನಡೆಯುತ್ತಿದೆ. ಸೋಮವಾರ ಸದನದಲ್ಲಿ ಗೃಹ ಸಚಿವರಾದ ಜಿ ಪರಮೇಶ್ವರ್, ಎಸ್ ಐಟಿ ನೀಡಿದ ಒಂದಷ್ಟು ವರದಿಯನ್ನೂ ವಿವರಿಸಿದ್ದಾರೆ. ಎರಡು ಕಡೆಗಳಲ್ಲಿ ಅಸ್ಥಿಪಂಜರ, ಮೂಳೆ ಸಿಕ್ಕಿರುದಾಗಿ ಮತ್ತು ಮಣ್ಣಿನಲ್ಲಿ ಆಸಿಡ್ ಅಂಶವಿದ್ದು ಕೆಲವೊಂದು ಮೂಳೆಗಳು ಕರಗಿ ಹೋಗುವ ಸಾಧ್ಯತೆ ಇದ್ದು ಮಣ್ಣನ್ನೂ ಪರೀಕ್ಷೆಗೆ ಕಳಿಸಲಾಗಿದೆ. ಯಾವುದೇ ಕಾರಣಕ್ಕೂ ಸರಕಾರ ತನಿಖೆಯನ್ನು ಅರ್ಧಕ್ಕೆ ನಿಲ್ಲಿಸುದಿಲ್ಲ,ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆ ಆಗಿಯೇ ಆಗುತ್ತದೆ. ಯಾರನ್ನೂ ರಕ್ಷಿಸುವ ಪ್ರಶ್ನೆ ಇಲ್ಲ ಎಂದು ಖಡಕ್ಕಾಗಿ ಹೇಳಿದ್ದಾರೆ. ಮಾಧ್ಯಮಗಳು ಕೆಲವು ಸುಳ್ಳು ಸುದ್ದಿಗಳನ್ನೂ ಬಿತ್ತರಿಸುತ್ತಿವೆ. ಅದರ ಕುರಿತು ಎಲ್ಲಾ ವಿಷಯಗಳೂ ಗೊತ್ತಾಗಿವೆ. ಸಾಕ್ಷಿದಾರನ ಕುರಿತು, ಪ್ರಕರಣದ ಕುರಿತು ಸುಳ್ಳು ಸುದ್ದಿಗಳನ್ನು ಹಬ್ಬಿಸಿವೆ, ಇದೂ ನನ್ನ ಗಮನಕ್ಕೆ ಬಂದಿದೆ ಎಂದೂ ಗೃಹ ಸಚಿವರು ಹೇಳಿದ್ದಾರೆ.
ಪತ್ರಿಕೋದ್ಯಮದ ನೈತಿಕ ಜವಾಬ್ದಾರಿಯಿರುವ ಟಿವಿ ಮಾಧ್ಯಮಗಳು ಮತ್ತು ಅತೀಯಾಗಿ ಜನರನ್ನು ಹುಚ್ಚೆಬ್ಬಿಸುತ್ತಿರುವ ಯುಟ್ಯೂಬ್, ಫೇಸ್ಬುಕ್ ಪೇಜ್ ಗಳು ತನಿಖೆಯನ್ನು ದಿಕ್ಕು ತಪ್ಪಿಸುವಂತೆ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿರುವುದು, ಎಸ್ ಐ ಟಿ ತನಿಖೆಯ ಬಗ್ಗೆ ಉಹಾಪೋಹ, ಕಾಲ್ಪನಿಕ ಸುದ್ದಿಗಳನ್ನೂ ಬಿತ್ತರಿಸಿ ಜನರ ಮೇಲೆ ಒಬ್ಬರ ಪರವಾಗಿ ಒಳ್ಳೆಯ ಭಾವನೆ ಬರುವಂತೆ ಮಾಡುತ್ತಿರುವುದು ಎಸ್ ಐ ಟಿ ರಚನೆಯಾದಾಗಿನಿಂದ ನಡೆಯುತ್ತಲೇ ಇದೆ. ಇದರಿಂದ ಜನರು ಟಿವಿ ಮಾಧ್ಯಮಗಳ ಉಹಾಪೋಹ ಸುದ್ದಿಗಳನ್ನೇ ನೋಡಿ ಇದೇ ಸತ್ಯ ಎಂದು ನಂಬುವಂತಾಗಿದೆ. ಒಂದಷ್ಟು ವೀಕ್ಷಕರಂತೂ ಟಿ ವಿ ಮಾಧ್ಯಮಗಳ ಸಹವಾಸವೇ ಬೇಡ ಎನ್ನುವಂತಾಗಿದೆ.
ಮಾಧ್ಯಮಗಳೇ ದಾರಿ ತಪ್ಪಿದವೇ?
ಎಸ್ ಐ ಟಿ ತನಿಖೆಯನ್ನು ಬೆಂಬಲಿಸಿ, ನಿಷ್ಪಕ್ಷಪಾತವಾದ ತನಿಖೆ ಆಗುವಂತೆ ಮಾಡಬೇಕಿದ್ದ ಮಾಧ್ಯಮಗಳು, ಇತ್ತೀಚೆಗೆ ಗಾಳಿ ಸುದ್ದಿಗಳನ್ನೇ ಬಿತ್ತರಿಸಿ, ಎಸ್ ಐ ಟಿ ಅಧಿಕಾರಿಗಳೇ ಹೇಳಿಕೆ ಕೊಟ್ಟಂತೆ ಸುದ್ದಿ ಪ್ರಸಾರ ಮಾಡುತ್ತಿವೆ. ಯುಟ್ಯೂಬ್, ಫೇಸ್ಬುಕ್ ಪೇಜ್ ಗಳೂ ಇದರಲ್ಲಿ ಸೇರಿದೆ. ಕೆಲವೊಂದು ಟಿವಿ ವಾಹಿನಿಗಳಂತೂ ವೀಕ್ಷಕರು ತೀವ್ರ ಉದ್ವೇಗಕ್ಕೊಳಗಾಗುವಂತೆ, ಎಸ್ ಐ ಟಿ ತನಿಖೆಯ ಒಳಮರ್ಮದ ಕುರಿತು ತಮಗೆಲ್ಲವೂ ಗೊತ್ತಿದೆ ಎನ್ನುವಂತೆ ಪ್ರಸಾರ ಮಾಡುತ್ತಿರುವುದು ಕಳವಳಕಾರಿ. ಜನರಲ್ಲಿ ಇದನ್ನೇ ಎಸ್ ಐ ಟಿ ನೀಡಿದ ಅಧೀಕೃತ ಮಾಹಿತಿ ಎನ್ನುವಂತೆ ನಂಬಿಸಲಾಗುತ್ತಿದೆ. ಇದು ಟಿವಿ ಮಾಧ್ಯಮಗಳು ತಮ್ಮ ಹೊಣೆಗಾರಿಕೆಯಿಂದ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದಕ್ಕೆ ದೊಡ್ಡ ನಿದರ್ಶನ. ಟಿವಿ ಚಾನೆಲ್ ಗಳಿಗೆ ಎಷ್ಟೋ ಕೋಟಿ ಪೇಮೆಂಟ್ ಕೊಟ್ಟಿರಬೇಕು, ಅದಕ್ಕೆ ಈ ರೀತಿ ಪ್ರಸಾರ ಮಾಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಜನರು ಆರೋಪಿಸುತ್ತಿರುವುದೂ ಕೂಡ, ಜನರು ಟಿವಿ ಮಾಧ್ಯಮಗಳ ಕುರಿತು ನಂಬಿಕೆ,ವಿಶ್ವಾಸ ಕಳೆದುಕೊಳ್ಳುತ್ತಿರುವುದಕ್ಕೆ ಸ್ಪಷ್ಟ ನಿದರ್ಶನ.
ನಿನ್ನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಸಿದ್ದರಾಮಯ್ಯ ವಿರುದ್ದ ಎಂದೋ ನೀಡಿದ್ದ ಹೇಳಿಕೆಯನ್ನು, ಸೌಜನ್ಯಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ನೀಡಿದ್ದುಎಂದು ಸೋಶಿಯಲ್ ಮೀಡಿಯಾದಲ್ಲಿ ಎಡಿಟ್ ಮಾಡಿ ಯಾರೋ ವೈರಲ್ ಮಾಡಿದ್ದ ವಿಡಿಯೋವೊಂದನ್ನು ಟಿವಿ ಮಾಧ್ಯಮಗಳು ಯಾವುದೇ ಫ್ಯಾಕ್ಟ್ ಚೆಕ್ ಮಾಡದೇ ಪ್ರಸಾರ ಮಾಡಿರುವುದು ಟಿವಿ ವಾಹಿನಿಗಳು ಅಧ್ಯಯನ ಮಾಡದೇ ಯಾವ ರೀತಿಯಲ್ಲಿ ಕೆಲಸ ಮಾಡುತ್ತವೆ ಎನ್ನುವುದನ್ನು ತೋರಿಸಿದೆ ಎಂದೂ ಜನರು ವಿಶ್ಲೇಷಿಸುವಂತಾಗಿದೆ. ಟಿವಿ ಮಾಧ್ಯಮಗಳ, ಸಾಮಾಜಿಕ ಮಾಧ್ಯಮಗಳ ಉಹಾಪೋಹಗಳು, ಮೂಗಿನ ನೇರದ ಚರ್ಚೆಗಳು ಎಸ್ ಐಟಿಯ ಮೂಲ ತನಿಖೆಯ ಬಗ್ಗೆಯೇ ಕೆಲವೊಂದು ಪೂರ್ವಾಗ್ರಹವನ್ನು ಬಿಂಬಿಸುತ್ತಿರುವುದಂತೂ ನಿಜ. ಕೆಲವೊಂದು ಯುಟ್ಯೂಬ್ ಚಾನೆಲ್ ಗಳು ಫೇಸ್ಬುಕ್ ಪೇಜ್ ಗಳೂ ಕೂಡ ಸುಳ್ಳು ಸುದ್ದಿಯ ಸರದಾರರಾಗಿಬಿಟ್ಟಿವೆ.
“ತನಿಖೆಯ ಕುರಿತು ಎಸ್ ಐ ಟಿ ಆಗಾಗ ನೀಡುವ ಅಧಿಕೃತ ಮಾಹಿತಿಯನ್ನಷ್ಟೇ ನಂಬುವುದು ಒಳ್ಳೆಯದು. ಎಸ್ ಐಟಿ ತನಿಖೆಯನ್ನೇ ದಿಕ್ಕು ತಪ್ಪಿಸುವಂತಹ ಹೇಳಿಕೆಗಳನ್ನು ಯಾರೇ ನೀಡಿದರೂ ಎಸ್ ಐ ಟಿ ಕ್ರಮ ಕೈಗೊಳ್ಳಬೇಕಿದೆ. ತನಿಖೆ ಆಗಾಗ ಹೊರಗೆಡಹುವ ಸತ್ಯಗಳನ್ನಷ್ಟೇ ಜನರಿಗೆ ತಲುಪಿಸುವ ಕೆಲಸ ಆಗಬೇಕು. ಗಾಳಿ ಸುದ್ದಿಗಳ ವೈಭವೀಕರಣವಲ್ಲ. ತನಿಖೆಯಿಂದ ಎಲ್ಲವೂ ಹೊರಗೆ ಬರಲಿ, ನ್ಯಾಯ ಸಿಗಲಿ ಅನ್ನೋದು ಬಹುತೇಕ ಜನರ ಅಭಿಪ್ರಾಯ ಕೂಡ.












