ಮಕ್ಕಳಿಗೆ ಎಳವೆಯಲ್ಲಿ ತುಳು ಕಲಿಸಿದರೆ ಮಾತ್ರ ತುಳು ಸಂಸ್ಕೃತಿ‌ ಉಳಿಸಲು ಸಾಧ್ಯ: ಪೂರ್ಣಿಮಾ

ಉಡುಪಿ: ಮಕ್ಕಳಿಗೆ ತುಳುವನ್ನು ಎಳವೆಯಲ್ಲಿ ಕಲಿಸಿದರಷ್ಟೇ ಆ ಭಾಷೆ ಸಂಸ್ಕೃತಿ ಉಳಿಯಬಲ್ಲದು ಎಂದು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹೇಳಿದರು.

ಅವರು ಭಾನುವಾರ ಉಡುಪಿ ತುಳುಕೂಟದ 30 ನೇ ವರ್ಷದ ‘ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ’ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು.

ಮಕ್ಕಳಿಗೆ ಉಪದೇಶ ಮಾಡುವುದಕ್ಕಿಂತ ಅವರಿಗೆ ಅವಕಾಶಗಳನ್ನು ಒದಗಿಸಿ ಕೊಡಬೇಕು, ಈ ನಿಟ್ಟಿನಲ್ಲಿ ಎಸ್.ಎಸ್..ಎಲ್.ಸಿ.ಯಲ್ಲಿ ತುಳು ಅಧ್ಯಯನಕ್ಕೆ ಅವಕಾಶ ಮಾಡಿಕೊಡುತ್ತಿರುವುದು ಆಶಾದಾಯಕವಾಗಿದೆ. ಮಕ್ಕಳು ತುಳು ಭಾಷೆಯ ಅಧ್ಯಯನ, ಬಳಕೆ ಕೇವಲ ಪರೀಕ್ಷೆಗಷ್ಟೇ ಸೀಮಿತಗೊಳಿಸದೇ ಮುಂದಿನ ಜೀವನದಲ್ಲಿಯೂ ಮುಂದುವರಿಸಬೇಕು ಎಂದರು.

ಮುಂಬಯಿಯ ಸಾಹಿತಿ ಶಾರದಾ ಎಂ. ಅಂಚನ್ ಕೊಡವೂರು ಅವರ ‘ಅಕೇರಿದ ಎಕ್ಕ್’ ಕಾದಂಬರಿಗೆ ಈ ಬಾರಿಯ ಪಣಿಯಾಡಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಸಾಹಿತಿ ಸುಲೋಚನಾ ಜನಾರ್ಧನ್ ಪಚ್ಚಿನಡ್ಕ ಅವರು ಪ್ರಶಸ್ತಿ ಪುರಸ್ಕೃತ ಕಾದಂಬರಿಯನ್ನು ಪರಿಚಯಿಸಿದರು.

ಇದೇ ಸಂಧರ್ಭದಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯ ತುಳುಪಠ್ಯದಲ್ಲಿ ಶೇ 100 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಭದ್ರಾವತಿ ತುಳುಕೂಟದ ಅಧ್ಯಕ್ಷ ಸುಧಾಕರ ಶೆಟ್ಟಿ, ಉಡುಪಿ ಹೋಟೆಲ್ ಉದ್ಯಮಿ ಪ್ರಭಾಕರ್ ಪೂಜಾರಿ, ಸಮಾಜಸೇವಕ ಉಡುಪಿ ವಿಶ್ವನಾಥ ಶೆಣೆ ಉಪಸ್ಥಿತರಿದ್ದರು. ತುಳುಕೂಟದ ಪ್ರಧಾನ ಕಾರ್ಯದರ್ಶಿ ಗಂಗಾಧರ ಕಿದಿಯೂರು ಮತ್ತು ಕೋಶಾಧಿಕಾರಿ ಚೈತನ್ಯ ಎಂ. ಜಿ. ವೇದಿಕೆಯಲ್ಲಿದ್ದರು.

ತುಳುಕೂಟದ ಉಪಾಧ್ಯಕ್ಷ ದಿವಾಕರ ಸನಿಲ್ ಅವರು ಸ್ವಾಗತಿಸಿದರು, ಪಣಯಾಡಿ ಪ್ರಶಸ್ತಿ ಸಂಚಾಲಕಿ ಶಿಲ್ಪಾ ಜೋಶಿ ಪ್ರಾಸ್ತವಿಕ ಮಾತುಗಳನ್ನಾಡಿದರು, ತಾರಾ ಉಮೇಶ್ ಆಚಾರ್ಯ ಅವರು ಕಾರ್ಯಕ್ರಮ ನಿರೂಪಿಸಿದರು.