ಬೆಂಗಳೂರು: ಧರ್ಮಸ್ಥಳ ಗ್ರಾಮದ ಸುತ್ತಮುತ್ತಲಿನ ಅಮಾನುಷ ಘಟನೆಗಳು ನಡೆದಿದೆ. ಈ ಘಟನೆಗಳ ಎಸ್‌ಐಟಿ ತನಿಖೆಗೆ ಬೆಂಬಲಿಸಿ ಜಾಗೃತ ನಾಗರಿಕರು ಕರ್ನಾಟಕ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ರಾಜ್ಯ ಸಚಿವ ಸಂಪುಟದ ಸದಸ್ಯರ ಮತ್ತು ವಿರೋಧ ಪಕ್ಷದ ಸದಸ್ಯರ ಕಾನೂನು ವಿರೋಧಿ, ಸಂವಿಧಾನ ವಿರೋಧಿ ಹೇಳಿಕೆಗಳಿಗೆ ಜಾಗೃತ ನಾಗರಿಕರು ಕರ್ನಾಟಕದ ಮುಖಂಡರು ಖಂಡಿಸಿದ್ದಾರೆ.
ಧರ್ಮಸ್ಥಳ ಗ್ರಾಮದ ಸುತ್ತಮುತ್ತ ಕಳೆದ ನಾಲ್ಕು ದಶಕಗಳಿಂದ ಅತ್ಯಾಚಾರ, ಕೊಲೆ, ಭೂ ಕಬಳಿಕೆ ಪ್ರಕರಣಗಳು ಆಗಾಗ ಮುನ್ನೆಲೆಗೆ ಬರುತ್ತಲೇ ಇವೆ. ಶಾಲಾ ಕಾಲೇಜುಗಳಿಗೆ ಹೋದ ವಿದ್ಯಾರ್ಥಿನಿಯರು ನಾಪತ್ತೆಯಾಗಿ ನಂತರ ಶವವಾಗಿ ಸಿಕ್ಕ ಪದ್ಮಲತಾ, ಅತ್ಯಾಚಾರ ನಡೆದ ಕುರುಹುಗಳನ್ನೂ ಮೈಮೇಲೆ ಹೊತ್ತು ಸಿಕ್ಕ ಸೌಜನ್ಯಳ ಶವಗಳು, ಗ್ರಾಮದ ನಟ್ಟನಡುವೆ ಭೀಕರವಾಗಿ ಕೊಲೆಯಾದ ಆನೆ ಮಾವುತ ನಾರಾಯಣ ಮತ್ತು ಆತನ ತಂಗಿ ಯಮುನಾ, ತನ್ನ ಮನೆಯಲ್ಲೇ ಜೀವಂತ ಸುಟ್ಟುಹಾಕಲ್ಪಟ್ಟ ಶಿಕ್ಷಕಿ ವೇದವಲ್ಲಿ ಮುಂತಾಗಿ ಬಹು ಚರ್ಚಿತ ಪ್ರಕರಣಗಳು ನಾಗರಿಕ ಸಮಾಜಕ್ಕೆ ಕರುಳಿರಿಯುವ ಸಂಕಟಗಳಾಗಿ ಕಾಡುತ್ತಿವೆ.ಅಪಾರ ಭಕ್ತರನ್ನು ಹೊಂದಿರುವ, ಪುಣ್ಯಕ್ಷೇತ್ರವೆಂದೆ ಕರೆಸಿಕೊಳ್ಳುವ ಧರ್ಮಸ್ಥಳದ ಆಸುಪಾಸಿನಲ್ಲಿ ನಡೆದ ಇಂಥಾ ಘೋರ ಕೃತ್ಯಗಳನ್ನೆಸಗಿದ ಅಪರಾಧಿಗಳು ಇಂದಿಗೂ ಪತ್ತೆಯಾಗಿಲ್ಲ ಎಂಬುದು ಇನ್ನೂ ಕಳವಳಕಾರಿ ಸಂಗತಿ. ಧರ್ಮಕ್ಷೇತ್ರದಲ್ಲಿ ನಡೆದ ಈ ಪಾತಕಗಳು ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆಗೆ ಒಂದು ಗಂಭೀರ ಸವಾಲಾಗಿದೆ” ಎಂದು ಪ್ರಶ್ನಿಸಿದ್ದಾರೆ.
“2012 ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ರಾಜ್ಯವ್ಯಾಪಿ ಪ್ರತಿಭಟನೆಗಳು ನಡೆದವು. ಈ ಪ್ರಕರಣ ಪ್ರಾಥಮಿಕವಾಗಿ ಬೆಳ್ತಂಗಡಿ ಪೊಲೀಸರು, ಆ ನಂತರ ಸಿಐಡಿ, ಅಂತಿಮವಾಗಿ 2013 ರಲ್ಲಿ ಸಿ.ಬಿ.ಐ.ಗೆ ವರ್ಗಾವಣೆಗೊಂಡು, 2023 ರಲ್ಲಿ ಸಿಬಿಐ ನ್ಯಾಯಾಲಯದಿಂದ ಹೊರಬಿದ್ದ ತೀರ್ಪು ಮತ್ತಷ್ಟು ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತನಿಖಾಧಿಕಾರಿಗಳು ಮತ್ತು ವೈದ್ಯಾಧಿಕಾರಿಗಳು ಎಸಗಿದ ಗಂಭೀರ ದೋಷಗಳನ್ನು ಬೊಟ್ಟು ಮಾಡಿ ತೋರಿಸಿ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಕೋರ್ಟ್ ಆದೇಶಿಸಿದೆ. ಅದೇ ವೇಳೆಗೆ ನಿರಪರಾಧಿಯಾಗಿದ್ದ ಸಂತೋಷ್ ರಾವ್ ರವರ ಮೇಲೆ ಆರೋಪ ಸಾಬೀತುಪಡಿಸುವ ಯಾವ ಸಾಕ್ಷಿಗಳೂ ಇಲ್ಲವೆಂದು ಹೇಳಿ ಅನಾವಶ್ಯಕವಾಗಿ ಆತನನ್ನು ಜೈಲಿನಲ್ಲಿರಿಸಿದ್ದಕ್ಕೆ ಪರಿಹಾರ ನೀಡಲು ಕೂಡ ಆದೇಶಿಸಿದೆ. ಈಗ ಸಾಕ್ಷಿ ಫಿರ್ಯಾದುದಾರರೊಬ್ಬರು ಮುಂದೆ ಬಂದು ತಾನು ಧರ್ಮಸ್ಥಳ ದಲ್ಲಿ ಸ್ವಚ್ಚತಾ ಕಾರ್ಮಿಕನಾಗಿ ಕೆಲಸ ಮಾಡುವಾಗ ಹಲವಾರು ಹೆಣಗಳನ್ನು ಹೂತಿದ್ದೇನೆಂದು ನ್ಯಾಯಾಧೀಶರ ಸಮ್ಮುಖದಲ್ಲಿ ಮಾಡಿದ ಹೇಳಿಕೆಯ ನಂತರ ವಿಶೇಷ ತನಿಖಾ ದಳವೊಂದನ್ನು ಸರ್ಕಾರ ರಚಿಸಿ ತನಿಖೆ ನಡೆಯುತ್ತಿದೆ. ಸರ್ಕಾರದ ಈ ಕ್ರಮವನ್ನು ಬೆಂಬಲಿಸುತ್ತೇವೆ. ಧರ್ಮಕ್ಷೇತ್ರದಲ್ಲಿ ಪಾತಕ ಕೃತ್ಯಗಳನ್ನು ಎಸಗುತ್ತಿರುವವರನ್ನು ಪತ್ತೆಹಚ್ಚಿ, ಅಪರಾಧ ಎಸಗಿದವರು ಯಾರೇ ಇದ್ದರೂ, ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ನೆಲದ ಕಾನೂನಿನ ಅಡಿಯಲ್ಲಿ ಶಿಕ್ಷೆಯಾಗಬೇಕು” ಎಂದು ಜಾಗೃತ ನಾಗರಿಕರು ಕರ್ನಾಟಕದ ಮುಖಂಡರು ಆಗ್ರಹಿಸಿದ್ದಾರೆ.
ಇತ್ತೀಚಿಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಉಪ ಮುಖ್ಯಮಂತ್ರಿಗಳು, ಗೃಹ ಮಂತ್ರಿಗಳು ಆಡಿದ ಮಾತುಗಳು ನಮಗೆ ಆಘಾತವುಂಟುಮಾಡಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಮಂತ್ರಿಗಳ ಹೇಳಿಕೆಗಳೂ ಕೂಡಾ ಎಸ್.ಐ.ಟಿ. ಅಧಿಕಾರಿಗಳ ಧೃತಿಗೆಡಿಸುವಂತೆ ಇದೆ. ನ್ಯಾಯಯುತವಾಗಿ ಸತ್ಯ ಹೊರಬರಲೆಂದು ಕಾಯುತ್ತಿರುವ ಸಂತ್ರಸ್ಥರ ಕುಟುಂಬಗಳಿಗೆ ಭಯ ಹಾಗೂ ನಿರಾಸೆ ಹುಟ್ಟಿಸುವಂತೆ ಈ ಮಾತುಗಳಿವೆ. ಇನ್ನು ವಿರೋಧ ಪಕ್ಷವಾದ ಬಿ.ಜೆ.ಪಿ.ಯ ಶಾಸಕರುಗಳ ಮಾತುಗಳು, ನಡವಳಿಕೆಯಂತೂ ಕಾನೂನು ಪ್ರಕ್ರಿಯೆಯನ್ನೇ ಅಪಹಾಸ್ಯ ಮಾಡುತ್ತಿವೆ. ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡು ಜನರನ್ನು ಅನಗತ್ಯವಾಗಿ ಭಾವನಾತ್ಮಕವಾಗಿ ಪ್ರಚೋದಿಸುತ್ತಿದ್ದಾರೆ. ಇವರೆಲ್ಲರ ಇಂಥಹ ನಡವಳಿಕೆಯಿಂದ ಈ ಪ್ರಕರಣಗಳಿಗೆ ಸಂಬಂಧಿಸಿದ ಸಾಕ್ಷಿದಾರರಲ್ಲಿ ಭಯಭೀತಿ ಹುಟ್ಟಿಸುವಂತಾಗಿರುವುದು ಮತ್ತೂ ಗಂಭೀರವಾದ ವಿಷಯ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಹತ್ಯೆ, ಅತ್ಯಾಚಾರಗಳಂತಹ ಹೇಯ ಕೃತ್ಯ ಎಸಗಿದವರನ್ನು ಪತ್ತೆ ಮಾಡಲು ತಮ್ಮದೇ ಸರ್ಕಾರವಿದ್ದಾಗ ಪ್ರಯತ್ನವೇ ಮಾಡದ ವಿರೋಧ ಪಕ್ಷದವರು ಈಗಲೂ ಅದಕ್ಕೆ ಅಡ್ಡಿ ಪಡಿಸುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ಪಾತಕ ಎಸಗಿದ ವ್ಯಕ್ತಿಗಳ ಬಗ್ಗೆ ಮಾತನಾಡಿದರೆ ಅದನ್ನು ದುರುದ್ದೇಶಪೂರ್ವಕವಾಗಿ ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರವೆಂದು ಬಿಂಬಿಸುತ್ತಿದ್ದಾರೆ. ಅಪಾರ ಸಂಖ್ಯೆಯ ಭಕ್ತರ ನಂಬಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳುವ ಸಂಚು ಇದಾಗಿದೆ. ಇದು ನೈತಿಕವಾಗಿಯೂ, ಧಾರ್ಮಿಕವಾಗಿಯೂ ಅಕ್ಷಮ್ಯ ಅಪರಾಧ. ನಾವು ಗಮನಿಸಿದಂತೆ ಧರ್ಮಸ್ಥಳ ಕ್ಷೇತ್ರದ ಕುರಿತು ಅವಹೇಳನಕಾರಿಯಾಗಿ ಯಾರೂ ಮಾತನಾಡುತ್ತಿಲ್ಲ. ದರ್ಮಕ್ಷೇತ್ರದಲ್ಲಿ ನಡೆದ ದುರ್ಘಟನೆಗಳಿಗೆ ಕಾರಣರಾದ ದುಷ್ಕರ್ಮಿಗಳು ಯಾರೆಂಬ ಸತ್ಯವನ್ನು ಬಯಲಿಗೆಳೆದು, ಕಾನೂನು ಕ್ರಮಕ್ಕೆ ಒಳಪಡಿಸಿ ಎಂಬುದು ಇಡೀ ನಾಗರಿಕ ಸಮಾಜದ ಆಗ್ರಹವಾಗಿದೆ” ಎಂದು ತಿಳಿಸಿದ್ದಾರೆ.
“ಅಪರಾಧಿಗಳು ಯಾರೆಂದು ಬಯಲಾಗುವುದನ್ನು ತಡೆಯಲೆಂಬಂತೆ ಮತ್ತು ತಪ್ಪಿತಸ್ಥರನ್ನು ರಕ್ಷಿಸಲು ಟೊಂಕ ಕಟ್ಟಿ ನಿಂತಿರುವಂತೆ ಕೆಲವು ಶಕ್ತಿಗಳು ವರ್ತಿಸುತ್ತಿರುವುದು ಇಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆದ್ದರಿಂದ ನ್ಯಾಯ ಮತ್ತು ಸತ್ಯದ ಪರವಾಗಿ ನಿಂತು ಕುಟುಂಬದ ಎಳೆ ಬಾಲೆಯರ ಮೇಲೆ ನಡೆದ ಅತ್ಯಾಚಾರ, ಕೊಲೆಗಳಿಗೆ ನ್ಯಾಯ ಕೊಡಿರೆಂದು ಕೇಳುತ್ತಿರುವ ಹೆತ್ತ ತಾಯಂದಿರಿಗೆ ಕನಿಷ್ಟ ಸಾಂತ್ವನದ ಹೆಜ್ಜೆಗಳಾಗಿ ಎಸ್.ಐ.ಟಿ. ತನಿಖೆಯನ್ನು ನಾವು ಪರಿಗಣಿಸುತ್ತೇವೆ. ಯಾವುದೇ ಅಡ್ಡಿ ಅಡಚಣೆಗಳಿಗೆ ಆಸ್ಪದ ಕೊಡದಂತೆ ಎಸ್ಐ.ಟಿ ನಿರಾತಂಕವಾಗಿ ಕಾರ್ಯನಿರ್ವಹಿಸಿ, ಒಂದು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು. ಹಾಗೆಯೇ, ತಮ್ಮ ಕಾನೂನುಬಾಹಿರ / ಅನೈತಿಕ ಹೇಳಿಕೆಗಳ ಮೂಲಕ ಎಸ್.ಐ.ಟಿ. ತನಿಖೆಯನ್ನು ಗೊಂದಲಕ್ಕೆ ದೂಡದಂತೆ ತಮ್ಮ ಸಂಪುಟದ ಸದಸ್ಯರಿಗೆ ತಾಕೀತು ಮಾಡಬೇಕಾಗಿ ತಮ್ಮಲ್ಲಿ ಆಗ್ರಹಿಸುತ್ತೇವೆ” ಎಂದು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಸಮಾಜದ ವಿವಿಧ ವಲಯದ ಗಣ್ಯರಾದ ಪ್ರೊ.ಕೆ.ಮರುಳಸಿದ್ದಪ್ಪ, ಡಾ.ಜಿ.ರಾಮಕೃಷ್ಣ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಡಾ.ಬಂಜಗೆರೆ ಜಯಪ್ರಕಾಶ್, ವಿಮಲಾ.ಕೆ.ಎಸ್., ಬಿ.ಶ್ರೀಪಾದ ಭಟ್, ಡಾ.ಮೀನಾಕ್ಷಿ ಬಾಳಿ, ಡಾ.ವಸುಂಧರಾ ಭೂಪತಿ, ಡಾ.ಎನ್ ಗಾಯತ್ರಿ, ನೀಲಾ.ಕೆ, ಜಾಣಗೆರೆ ವೆಂಕಟರಾಮಯ್ಯ, ರುದ್ರಪ್ಪ ಹುನಗವಾಡಿ, ಇಂದಿರಾ ಕೃಷ್ಣಪ್ಪ, ಮಾವಳ್ಳಿ ಶಂಕರ್ ಸಹಿ ಹಾಕಿ ಮುಖ್ಯಮಂತ್ರಿಗಳಿಗೆ ಬರೆದಿದ್ದಾರೆ.












