ಅಗಲಿದ ಕಲಾವಿದ ವಿನಯ ಆಚಾರ್ಯ ಕುಟುಂಬಕ್ಕೆ ಸಹಾಯಧನ ವಿತರಣೆ

ಮಂಗಳೂರು: ಇತ್ತೀಚೆಗೆ ನಿಧನರಾದ ಯುವ ಯಕ್ಷಗಾನ ಕಲಾವಿದ ಕಡಬ ವಿನಯ ಆಚಾರ್ಯ ಅವರ ಮಾತೃಶ್ರೀಯವರಾದ ಸುಲೋಚನಾ ಆಚಾರ್ಯ ಅವರಿಗೆ ಉಡುಪಿ ಯಕ್ಷಗಾನ ಕಲಾರಂಗ (ರಿ.) ಇದರ ವತಿಯಿಂದ 50 ಸಾವಿರ ರೂಪಾಯಿಯ ಚೆಕ್‌ನ್ನು ವಿತರಿಸಲಾಯಿತು.
ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ ರಾವ್ ಮತ್ತು ಕಾರ್ಯದರ್ಶಿ ಮುರಲಿ ಕಡೆಕಾರ್ ಅವರ ನೇತೃತ್ವದಲ್ಲಿ ಯಕ್ಷಗಾನ ಕಲಾರಂಗದ ತಂಡವು ವಾಮದಪದವಿನ ಕಡಬ ವಿನಯ ಆಚಾರ್ಯ ಅವರ ಮನೆಗೆ ಭೇಟಿ ನೀಡಿ ಪ್ರತಿಭಾವಂತ ಯುವ ಕಲಾವಿದನ ಅಕಾಲಿಕ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿತು.
ಕಡಬ ವಿನಯ ಆಚಾರ್ಯ ಅವರನ್ನು ಅವಲಂಬಿಸಿರುವ ಅವರ ಮಾತೃಶ್ರೀಯವರಿಗೆ ನೆರವಾಗುವ ನಿಟ್ಟಿನಲ್ಲಿ ಈ ಸಹಾಯಧನವನ್ನು ನೀಡುತ್ತಿದ್ದೇವೆ’ ಎಂದು ಕೆ. ಗಣೇಶ ರಾವ್ ಹೇಳಿದರು.
ಕಡಬ ವಿನಯ ಆಚಾರ್ಯರ ತಂದೆ ಕಡಬ ನಾರಾಯಣ ಆಚಾರ್ಯರು ಕೂಡ ಪ್ರತಿಭಾವಂತ ಮದ್ದಲೆವಾದಕರು. ಯಕ್ಷಗಾನಕ್ಕೆ ಇನ್ನಷ್ಟು ಕೊಡುಗೆ ನೀಡುವ ನಿರೀಕ್ಷೆಯಲ್ಲಿದ್ದ ಈ ಇಬ್ಬರು ಕಲಾವಿದರನ್ನು ಯಕ್ಷಗಾನ ರಂಗ ಬಹಳ ಬೇಗನೆ ಕಳೆದುಕೊಂಡಿತು’ ಎಂದು ಮುರಲಿ ಕಡೆಕಾರ್ ವಿಷಾದ ವ್ಯಕ್ತಪಡಿಸಿದರು.
ಕಡಬ ವಿನಯ ಆಚಾರ್ಯರ ಸಹೋದರ ಕಡಬ ವಿಶ್ವನಾಥ ಆಚಾರ್ಯ, ಯಕ್ಷಗಾನ ಕಲಾರಂಗದ ಕಾರ್ಯಕಾರಿ ಸಮಿತಿಯ ಸದಸ್ಯರಾದ ವಿಜಯ ಕುಮಾರ ಮುದ್ರಾಡಿ, ಪ್ರಥ್ವಿರಾಜ ಕವತ್ತಾರ್, ಶ್ರೀಮತಿ ವಿದ್ಯಾ ಪ್ರಸಾದ್ ಉಪಸ್ಥಿತರಿದ್ದರು.