ಉಡುಪಿ: ರಾಜ್ಯದ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳಲ್ಲಿ ಬೇಕಾದಷ್ಟು ಹಣವಿದ್ದು, ಹೀಗಾಗಿ ಮುಂದಿನ ದಿನಗಳಲ್ಲಿ ಬಡವರು ದೇವಸ್ಥಾನಗಳಲ್ಲಿಯೇ ಮದುವೆ ಮಾಡಿಕೊಳ್ಳಬೇಕು. ದೇವಸ್ಥಾನಗಳಲ್ಲಿಯೇ ಸಾಮೂಹಿಕ ವಿವಾಹಗಳನ್ನು ಆಯೋಜಿಸಿ ಬಡ ಜೋಡಿಗಳಿಗೆ ಮದುವೆ ಮಾಡಿಸುವಂತೆ ಕರ್ನಾಟಕ ರಾಜ್ಯದಲ್ಲಿರುವ ಶ್ರೀಮಂತ ದೇಗುಲಗಳ ಮುಖಂಡರು ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ
ಹೇಳಿದರು.
ಬ್ರಹ್ಮಶ್ರೀ ನಾರಾಯಣಗುರುಗಳ 165ನೇ ಜನ್ಮ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ ಜಿಲ್ಲಾಮಟ್ಟದ ಭಾಷಣ, ಪ್ರಬಂಧ, ರಸಪ್ರಶ್ನೆ ಸ್ಪರ್ಧೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾವಿರ ಜೋಡಿಗಳ ಸಾಮೂಹಿಕ ವಿವಾಹ ಆಯೋಜಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಾಕಿಕೊಳ್ಳಲಾಗುವುದು. ಮದುವೆಗೆ ಬೇಕಾಗುವ ತಾಳಿ, ಬಟ್ಟೆ ಮೊದಲಾದ ವಸ್ತುಗಳನ್ನು ದೇಗುಲಗಳ ವತಿಯಿಂದಲೇ ಒದಗಿಸಲಾಗುವುದು ಎಂದರು.
ತಾಳ್ಮೆ ಎಂದೂ ಮನುಷ್ಯನ ದೌರ್ಬಲ್ಯ ಅಲ್ಲ. ಇದ್ದು ಜಯಿಸಬೇಕಾದ ಕ್ಷೇತ್ರ ಅಂದರೆ ರಾಜಕಾರಣ. ನಾವು (ಬಿಲ್ಲವರು) ಸಮಾಜದ ಕಟ್ಟಕಡೆಯ ಮನುಷ್ಯರ ವರ್ಗದಲ್ಲಿ ಬದುಕಿ ಬಂದವರು. ವ್ಯವಸ್ಥೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿಕೊಂಡು ಬಂದವರು. ಹಾಗಾಗಿ ಸಮಾಜದ ಸಂಘಟನೆಗೆ ಹೆಚ್ಚು ಒತ್ತು ನೀಡಿ, ಸಮಾಜದ ಅಭಿವೃದ್ಧಿ ಶ್ರಮಿಸಬೇಕು ಎಂದು ಕರೆನೀಡಿದರು.
ರಾಜಕಾರಣ ಸನ್ಯಾಸಿಗಳ ಸಂಗ ಅಲ್ಲ. ಅದು ಕೈ ಹಿಡಿದು ಎತ್ತುವವರು, ಪ್ರೀತಿಸುವವರು, ಗೌರವಿಸುವವರು ಹಾಗೂ ಯಾರಿಗೂ ಗೊತ್ತಾಗದಂತೆ ಕಾಲಿಗೆ ಕೈ ಹಾಕುವವರು ಇರುವಂತಹ ವ್ಯವಸ್ಥೆ. ಇದೊಂದು ಸುಖದ ಸುಪ್ಪತ್ತಿಗೆ ಅಲ್ಲ, ಬ್ರಹ್ಮಾಂಡದ ಗೊಂದಲವು ಅಲ್ಲ. ನನಗೆ ರಾಜಕಾರಣಿ ಆಗಬೇಕೆಂಬ ಆಸೆ ಇತ್ತು. ಹಾಗಾಗಿ ರಾಜಕೀಯಕ್ಕೆ ಬಂದಿದ್ದೇನೆ. ಇದ್ದು ಹೋರಾಟ ಮಾಡುವ ಶಕ್ತಿ ಇದ್ದರೆ ಈ ಕ್ಷೇತ್ರದಲ್ಲಿ ಇರಬೇಕು. ಇದರಲ್ಲಿಯೇ ಇರಿ ಎಂದು ಯಾರೂ ಬಲವಂತ ಮಾಡಲ್ಲ. ನನ್ನ ಆಸಕ್ತಿ, ಶ್ರಮ, ಸಂಘಟನಾತ್ಮಕ ಅನುಭವದ ಆಧಾರದಲ್ಲಿದ್ದುಕೊಂಡು ನನ್ನ ಪಕ್ಷದಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಕಳ ಬಿಲ್ಲವ ಸೇವಾ ಸಂಘದ ಡಿ.ಆರ್. ರಾಜು, ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಗೋಪಾಲ್ ಸಿ. ಬಂಗೇರ, ಪಡುಬಿದ್ರಿ ಬಿಲ್ಲವ ಸೇವಾ ಸಂಘದ ಸುಧೀರ್ ಕುಮಾರ್, ಗಂಗೊಳ್ಳಿ ಬಿಲ್ಲವ ಸೇವಾ ಸಂಘದ ಶಿವಾನಂದ ಪೂಜಾರಿ ಗಂಗೊಳ್ಳಿ, ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಮಾಧವ ಬನ್ನಂಜೆ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ, ತಾಪಂ ಅಧ್ಯಕ್ಷೆ ನೀತಾ ಗುರುರಾಜ್, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ನಗರಸಭಾ ಸದಸ್ಯರಾದ ಪ್ರಭಾಕರ ಪೂಜಾರಿ,
ವಿಜಯಪೂಜಾರಿ, ಸುಂದರ್ ಜೆ. ಕಲ್ಮಾಡಿ, ಗಿರೀಶ್ ಎಂ. ಅಂಚನ್, ಸಂತೋಷ್ ಪೂಜಾರಿ, ಜಯಂತಿ ಪೂಜಾರಿ, ಅಶ್ವಿನಿ ಅರುಣ್ ಪೂಜಾರಿ, ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್, ಸರ್ಕಾರಿ ಅಭಿಯೋಜಕ ವಿಜಯವಾಸು ಪೂಜಾರಿ, ಮಹೇಶ್ ಮಲ್ಪೆ, ರಕ್ಷಾ ಸಾಲಿಯಾನ್ ಮೊದಲಾದವರು ಉಪಸ್ಥಿತರಿದ್ದರು.
ಎಂ. ಮಹೇಶ್ ಕುಮಾರ್ ಸ್ವಾಗತಿಸಿದರು. ದಯಾನಂದ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.