2012ರಲ್ಲಿ ಧರ್ಮಸ್ಥಳದಲ್ಲಿ ಯುವತಿ ನಾಪತ್ತೆ ಪ್ರಕರಣ; ಯುವತಿಯ ಸಹೋದರರಿಂದ ಎಸ್.ಐ.ಟಿ.ಗೆ ದೂರು.

ಬೆಳ್ತಂಗಡಿ: ಬಂಟ್ವಾಳ ತಾಲೂಕಿನ ಕಾವಳ ಮುಡೂರು ಗ್ರಾಮದ ನಿವಾಸಿ ಯುವತಿಯೊಬ್ಬಳು 2012ರಲ್ಲಿ ಧರ್ಮಸ್ಥಳಕ್ಕೆ ಹೋದಾಕೆ ಮನೆಗೆ ಹಿಂತಿರುಗಿ ಬಾರದೆ ನಾಪತ್ತೆಯಾಗಿರುವ ಬಗ್ಗೆ ಆಕೆಯ ಸಹೋದರರಾದ ನಿತಿನ್ ಹಾಗೂ ನಿತೇಶ್ ಎಂಬವರು ಬೆಳ್ತಂಗಡಿ ಎಸ್.ಐ.ಟಿ ಕಚೇರಿಗೆ ಆಗಮಿಸಿ ಗುರುವಾರ ದೂರು ನೀಡಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನಿತಿನ್ ತನ್ನ ತಂಗಿ ನಾಪತ್ತೆಯಾಗಿ‌ 13 ವರ್ಷಗಳಾದರೂ ಯಾವುದೆ ಮಾಹಿತಿ ಲಭ್ಯವಾಗಿಲ್ಲ. ಇದೀಗ ಎಸ್.ಐ.ಟಿ ತಂಡ ನಾಪತ್ತೆಯಾ ದವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವುದು ತಿಳಿದು ಬಂದಿದ್ದು ಈ ಹಿನ್ನಲೆಯಲ್ಲಿ ಎಸ್.ಐ‌.ಟಿ ಕಚೇರಿಗೆ ಬಂದು ದೂರನ್ನು ನೀಡಿರುವುದಾಗಿ ತಿಳಿಸಿದರು. 2012ರಲ್ಲಿ 17 ವರ್ಷ ಪ್ರಾಯದ ತನ್ನ ತಂಗಿ ಹೇಮಲತಾ ಮನೆಯ ಸಮೀಪದ ಮಹಿಳೆಯೊಂದಿಗೆ ಧರ್ಮಸ್ಥಳಕ್ಕೆ ಬಂದಿದ್ದರು. ಆದರೆ ಆಕೆ ಮತ್ತೆ ಹಿಂತಿರುಗಿ ಬರಲಿಲ್ಲ. ಈ ಬಗ್ಗೆ ಆಕೆಯನ್ನು ಕರೆದೊಯ್ದ ಮಹಿಳೆಯನ್ನು ವಿಚಾರಿಸಿದರೆ ಆಕೆ ನನ್ನೊಂದಿಗೆ ಬಂದಿಲ್ಲ ಎಂಬ ಉತ್ತರ ನೀಡುತ್ತಿದ್ದಾಳೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸರಿಗೆ ಸಂದರ್ಭದಲ್ಲಿ ದೂರನ್ನು ನೀಡಿದ್ದೆವು ಅವರು ದೂರನ್ನು ಸ್ವೀಕರಿಸಿದ್ದರು. ಹಲವು ಬಾರಿ ಠಾಣೆಗೆ ತೆರಳಿ ವಿಚಾರಿಸಿದರೂ ಯಾವುದೇ ಮಾಹಿತಿಗಳು ಲಭಿಸಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಮಹಿಳೆಯ ಮೇಲೆ ಅನುಮಾನ:
ಇದೀಗ ಎಸ್.ಐ.ಟಿ ತಂಡ ನಡೆಸುತ್ತಿರುವ ತನಿಖೆಯ ಬಗ್ಗೆ ಮಾಹಿತಿ ತಿಳಿದು ದೂರು ನೀಡಲು ಬಂದಿದ್ದೇನೆ. ನಮಗೆ ಯಾರ ಮೇಲೆಯೂ ಅನುಮಾನವಿಲ್ಲ. ಆಕೆಯನ್ನು ಕರೆದೊಯ್ದ ಮಹಿಳೆಯ ಬಗ್ಗೆಯೇ ಅನುಮಾನವಿದೆ ಆಕೆಯನ್ನು ವಿಚಾರಣೆಗೆ ಒಳಪಡಿಸಿದರೆ ಸತ್ಯ ಹೊರಬರಬಹುದು ಎಂಬುದು ನಮ್ಮ ಭಾವನೆಯಾಗಿದೆ ಎಂದು ತಿಳಿಸಿದ್ದಾರೆ.

ಎಂಟನೆ ತರಗತಿಯವರೆಗೆ ಕಲಿತು ಬಳಿಕ ಮನೆಯಲ್ಲಿದ್ದು ಬೀಡಿ ಕಟ್ಟುತ್ತಿದ್ದಳು. ಆಕೆಯ ಕೈಯಲ್ಲಿ ಮೊಬೈಲ್ ಕೂಡಾ ಇರಲಿಲ್ಲ. ನಮ್ಮಿಂದ ಸಾಧ್ಯವಾದ ರೀತಿಯಲ್ಲೆಲ್ಲ ಹುಡುಕಿದ್ದೇವೆ ಆದರೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ ಎಂದು ನಿತಿನ್ ತಿಳಿಸಿದ್ದಾರೆ.
ಸದ್ಯ ಯುವತಿ ನಾಪತ್ತೆಯಾದ ಬಗ್ಗೆ ಪೂಂಜಾಲಕಟ್ಟೆ ಠಾಣೆಗೆ ನಿತಿನ್ ದೂರನ್ನು ನೀಡಿದ್ದು ಪೊಲೀಸರು ದೂರು ಸ್ವೀಕರಿಸಿದ್ದಾರೆ.