ಮಂಗಳೂರು: ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ಮಂಗಳೂರು ದಸರಾಕ್ಕೆ ಭಾನುವಾರ ಅದ್ದೂರಿ ಚಾಲನೆ ದೊರೆಯಿತು. ಸರ್ಕಾರದ ಯಾವುದೇ ಅನುದಾನ ಇಲ್ಲದ ಈ ಮಂಗಳೂರು ದಸರಾಕ್ಕೆ ಈ ಬಾರಿ 28ನೇ ವರ್ಷದ ಸಂಭ್ರಮ. ನವರಾತ್ರಿಯ ೯ ದಿನಗಳ ಕಾಲ ಈ ಕ್ಷೇತ್ರದಲ್ಲಿ ಆರಾಧನೆಗೊಳ್ಳಲಿರುವ ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ಇಂದು ಅದ್ದೂರಿಯಿಂದ ನಡೆಯಿತು.
ಮಂಗಳೂರು ಪೊಲೀಸ್ ಆಯುಕ್ತ ಡಾ ಪಿ ಎಸ್ ಹರ್ಷ ದೀಪಬೆಳಗಿಸಿ ನವರಾತ್ರಿ ದಸರಾ ಮಹೋತ್ಸಕ್ಕೆ ಚಾಲನೆ ನೀಡಿದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಮಹೋತ್ಸವವನ್ನು ಅದ್ದೂರಿಯಾಗಿ “ಮಂಗಳೂರು ದಸರಾ” ಎಂದು ಆಚರಿಸಲಾಗುತ್ತದೆ.
ಮಂಗಳೂರು ದಸರಾವೂ ಸದ್ಯ ಮೈಸೂರು ದಸರದಷ್ಟೇ ಪ್ರಸಿದ್ದಿಯನ್ನು ಪಡೆಯುತ್ತಿದೆ. ಕಳೆದ 27 ವರ್ಷಗಳಿಂದ ಅದ್ದೂರಿಯಾಗಿ ನಡೆದ ಮಂಗಳೂರು ದಸರಾಕ್ಕೆ ಈ ಬಾರಿ 28ನೇ ವರ್ಷದ ಸಂಭ್ರಮ. ಮಂಗಳೂರು ದಸರಾ ಮಹೋತ್ಸವವನ್ನು ಆಯೋಜಿಸುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಇಂದಿನಿಂದ ಒಂಬತ್ತು ದಿನಗಳ ಕಾಲ ನಡೆಯಲಿದೆ.
ಕ್ಷೇತ್ರದಲ್ಲಿ ವಿಘ್ನವಿನಾಶಕ ಗಣೇಶ, ವಿದ್ಯಾದೇವಿ ಶಾರದಾ ಮಾತೆ, ಆದಿಶಕ್ತಿ ಹಾಗೂ ನವದುರ್ಗೆಯರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಎಲ್ಲಾ ದೇವರುಗಳನ್ನು ಏಕಕಾಲಕ್ಕೆ ಪ್ರತಿಷ್ಠಾಪಿಸಲಾಗಿದ್ದು ಒಂಬತ್ತು ದಿನಗಳ ಕಾಲ ಪೂಜೆಗೊಳ್ಳಲಿದೆ.
ಈ ಕ್ಷೇತ್ರದಲ್ಲಿ ಪ್ರತಿಷ್ಠಾಪನೆಗೊಂಡ ನವದುರ್ಗೆಯರು ದೇಶ ವಿದೇಶದ ಭಕ್ತರನ್ನು ಸೆಳೆಯುತ್ತದೆ. ಗಣಪತಿ, ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ದಿದಾತ್ರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ ಮಹಾಗೌರಿಯರನ್ನು ಇಲ್ಲಿನ ಸುಂದರ ಕಲಾಕೃತಿಗಳ ಮಂಟಪದಲ್ಲಿ ಪ್ರತಿಷ್ಠಾಪಿಸಲಾಗಿದೆ. ಒಂದೇ ಸಭಾಂಗಣದಲ್ಲಿ ಅತ್ಯಾಕರ್ಷ ಸಂಯೋಜನೆಯಲ್ಲಿ ಈ ೧೨ ದೇವರುಗಳನ್ನು ನೋಡುವುದು ಭಕ್ತರ ಕಣ್ಣಿಗೊಂದು ಹಬ್ಬವೇ ಸರಿ. ಮೈಸೂರು ದಸರಾಕ್ಕೆ ಇದು ಸರಿಸಾಟಿ ಎಂದು ಭಕ್ತರು ಬಣ್ಣಿಸುತ್ತಾರೆ. ಈ ರೀತಿ ನವರಾತ್ರಿಯ ಸಂದರ್ಭ ದೇವರುಗಳ ಪ್ರತಿಷ್ಠಾಪನೆ ದೇಶದ ಬೇರೆಲ್ಲೂ ಆಗೋದಿಲ್ಲ ಅನ್ನುವುದು ಇಲ್ಲಿನ ವಿಶೇಷತೆ.
ಕ್ಷೇತ್ರದ ಅಭಿವೃದ್ದಿಯ ರೂವಾರಿ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ನೇತೃತ್ವದಲ್ಲಿ ಈ ದಸರಾ ಮಹೋತ್ಸವ ನಡೆಯುತ್ತದೆ. ದೇಶ ವಿದೇಶಗಳಿಂದ ಒಂಬತ್ತು ದಿನಗಳ ಕಾಲ ಲಕ್ಷಾಂತರ ಮಂದಿ ಈ ಕ್ಷೇತ್ರಕ್ಕೆ ಭೇಟಿ ನೀಡಿ ಈ ದೇವರ ದರ್ಶನ ಪಡೆಯುತ್ತಾರೆ. ಈ ಎಲ್ಲಾ ದೇವರ ಮೂರ್ತಿಯನ್ನು ಅಕ್ಟೋಬರ್ 8ರಂದು ಬೃಹತ್ ಮಂಗಳೂರು ದಸರಾ ಮೆರವಣಿಗೆ ಮೂಲಕ ಕೊಂಡೊಯ್ಯುದ್ದು ನಂತರ ಕ್ಷೇತ್ರದ ಕೆರೆಯಲ್ಲೇ ವಿಸರ್ಜಿಸಲಾಗುತ್ತದೆ. ಈ ವೇಳೆ ಹತ್ತು ಲಕ್ಷಕ್ಕಿಂದ ಅಧಿಕ ಜನ ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಇಂದಿನ ಉದ್ಘಾಟನಾ ಸಂಭ್ರಮಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.












