ಉಡುಪಿ: ಕರ್ನಾಟಕ ಯುವ ರಕ್ಷಣಾ ವೇದಿಕೆಯು ವತಿಯಿಂದ ಕೊಡಮಾಡುವ 2025 ನೇ ಸಾಲಿನ ಸಮಾಜ ಸೇವೆ ಹಾಗೂ ಕಾರ್ಪೋರೇಟ್ ಉದ್ಯಮ ಕ್ಷೇತ್ರದ ಅತ್ಯುನ್ನತ ರಾಜ್ಯ ಪುರಸ್ಕಾರವಾದ ‘ಕರ್ನಾಟಕ ಸೇವಾ ರತ್ನ ಬೆಳ್ಳಿ ಪದಕ ಪ್ರಶಸ್ತಿ’ ಗೆ ಕುಂದಾಪುರದ ಪ್ರತಿಷ್ಠಿತ ಸೇವಾ ಸಿಂಚನ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರು ಹಾಗೂ ನಿರ್ದೇಶಕರು, ಜಿ.ಬಿ.ಪಿ.ಎಸ್.ಕೆ ಸಮೂಹದ ಸಂಸ್ಥಾಪಕ ಆಡಳಿತ ನಿರ್ದೇಶಕರಾದ ಜಿ.ಎಸ್. ಕಿರಣ್ ಕುಮಾರ್ ಕರ್ನಾಟಕದ ಏಕೈಕ ವ್ಯಕ್ತಿಯಾಗಿ ಆಯ್ಕೆಯಾಗಿದ್ದಾರೆ.
ಇವರು ಕುಂದಾಪುರ ತಾಲ್ಲೂಕಿನ ಉಪ್ಪಿನಕುದ್ರು ಗ್ರಾಮದ ಶ್ರೀಮತಿ ಗಿರಿಜಾ ಮತ್ತು ಶ್ರೀ ಬಾಬು ದಂಪತಿಗಳ ಪುತ್ರರಾಗಿದ್ದು, ಇವರ ಸುಧೀರ್ಘವಾದ ಸಾರ್ಥಕ ಸೇವೆ, ಶೈಕ್ಷಣಿಕ ಅನುಭವ, ವೃತ್ತಿ ಪರಿಣಿತಿ, ಸಮಗ್ರ ಸಾಧನೆ, ಪರಿಪೂರ್ಣ ನಾಯಕತ್ವ, ಸಂಘಟನಾ ಕೌಶಲ್ಯಗಳನ್ನು ಪರಿಗಣಿಸಿ ರಾಜ್ಯ ಸಮಿತಿಯು ಈ ಪ್ರಶಸ್ತಿಗೆ ಸಮಾಜ ಸೇವೆ ಹಾಗೂ ಕಾರ್ಪೋರೇಟ್ ಉದ್ಯಮ ಕ್ಷೇತ್ರದಿಂದ ಇವರನ್ನು ಆಯ್ಕೆಮಾಡಿರುತ್ತದೆ.
17 ಆಗಸ್ಟ್ 2025 ರ ಭಾನುವಾರದಂದು ಮೈಸೂರಿನ ಅಮೃತ ಮಹೋತ್ಸವ ಭವನದಲ್ಲಿ ಸಂಪನ್ನಗೊಳ್ಳಲಿರುವ ಕರ್ನಾಟಕ ಯುವ ರಕ್ಷಣಾ ವೇದಿಕೆಯ ಮೈಸೂರು ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಈ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉದ್ಘಾಟಿಸಲಿದ್ದು, ಸುತ್ತೂರು ಸಂಸ್ಥಾನ ಮಠದ ಜಗದ್ಗುರು ಪರಮಪೂಜ್ಯ ಶ್ರೀ ಡಾ. ಶಿವರಾತ್ರಿದೇಶಿಕೇಂದ್ರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವರು ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹಾದೇವಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ಎಸ್. ತಂಗಡಗಿ, ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಗಳಾದ ಜಿ. ಲಕ್ಷ್ಮೀಕಾಂತ ರೆಡ್ಡಿ, ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಖ್ ತನ್ವೀರ್ ಆಸೀಫ್, ಮೈಸೂರು ಪೊಲೀಸ್ ಆಯುಕ್ತರಾದ ಶ್ರೀಮತಿ ಸೀಮಾ ಲಾಟ್ಕರ್, ಕರ್ನಾಟಕ ಯುವ ರಕ್ಷಣಾ ವೇದಿಕೆಯ ಮಾರ್ಗದರ್ಶಕರು ಹಾಗೂ ಡಿ.ಡಿ.ಎ ಅಧ್ಯಕ್ಷರಾದ ಚುಂಚೇಗೌಡ್ರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಪ್ರತಾಪ್ ಸಿಂಹ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಶಿವಕುಮಾರ್ ಮೊದಲಾದವರ ಘನ ಉಪಸ್ಥಿತಿ ಇರಲಿದ್ದು, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಗೌಡ್ರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.


















