ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶಾಂತಿ ನೆಲೆಸಬೇಕೆಂದೇ ವಿಶೇಷ ಕಾರ್ಯಪಡೆ (ಎಸ್ಎಎಫ್) ರಚಿಸಿದ್ದೇವೆ. ಅದು ಶಾಶ್ವತವೂ ಅಲ್ಲ. ಆದರೆ, ಜನಪ್ರತಿನಿಧಿಗಳ ಸಹಕಾರ ಅಗತ್ಯ. ಇಲ್ಲದಿದ್ದರೆ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮನವಿ ಮಾಡಿದರು.
ಬಿಜೆಪಿಯ ವೇದವ್ಯಾಸ ಕಾಮತ್ ಪ್ರಶ್ನೆಗೆ ಉತ್ತರಿಸಿ, ಎರಡೂವರೆ ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ 30 ಕೊಲೆ ಪ್ರಕರಣಗಳ ಪೈಕಿ 24 ಪ್ರಕರಣಗಳಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು, 6 ಪ್ರಕರಣಗಳ ತನಿಖೆ ನಡೆಯುತ್ತಿದೆ. ಉಡುಪಿ ಜಿಲ್ಲೆಯ 21 ಕೊಲೆ ಪ್ರಕರಣಗಳಲ್ಲಿ 18 ಪ್ರಕರಣಗಳ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, 3 ಪ್ರಕರಣಗಳ ತನಿಖೆ ಆಗುತ್ತಿದೆ ಎಂದು ಹೇಳಿದರು.
ಉಡುಪಿ, ಶಿವಮೊಗ್ಗ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಕೋಮು ಗಲಭೆ ನಿಗ್ರಹಿಸಲು ಹೊಸದಾಗಿ ವಿಶೇಷ ಕಾರ್ಯಪಡೆ ರಚಿಸಿದ್ದು, ದ್ವೇಷ ಭಾಷಣ, ಉದ್ರೇಕಕಾರಿಘಟನೆ ಮತ್ತು ಕೋಮು ಸಂಬಂಧಿತ ಘಟನೆಗಳಿಗಾಗಿ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸುವವರ ಮೇಲೆ ನಿಗಾ ಇಡುವುದು, ಸಂಭಾವ್ಯ ಕೋಮು ಹಿಂಸಾಚಾರದ ಬಗ್ಗೆ ಕಣ್ಗಾವಲು ಹಾಗೂ ಮಾನವ ಗುಪ್ತಚರ ಮೂಲಕ ಎಚ್ಚರಿಕೆ ವ್ಯವಸ್ಥೆ ರಚಿಸುವುದು, ಪ್ರಾಬಲ್ಯದ ಮೂಲಕ ವಿಶ್ವಾಸ ವೃದ್ಧಿ ಕ್ರಮ ಕೈಗೊಳ್ಳುವುದು, ಮೂಲಭೂತೀಕರಣ ಗುರುತಿಸಿ, ಮೇಲ್ವಿಚಾರಣೆ ಮಾಡುವ ಹೊಣೆಗಾರಿಕೆಯನ್ನು ನೀಡಲಾಗಿದೆ ಎಂದು ವಿವರಿಸಿದರು.
ಕೋಮುಗಲಭೆ ಕಡಿಮೆ ಆಗಿದೆ :
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಜನರು ಬುದ್ಧಿವಂತರು. ಆದರೆ, 10-20 ವರ್ಷಗಳಿಂದೀಚೆಗೆ ಕೊಲೆ, ಗುಂಪು ಘರ್ಷಣೆಯಂತಹ ಪ್ರಕರಣಗಳಿಂದ ಜಿಲ್ಲೆಗಳಲ್ಲಿ ಭಯದ ವಾತಾವರಣ ನಿರ್ಮಾಣ ಆಗಿದೆ. ಇತ್ತೀಚೆಗೆ ಉದ್ಯಮಿಗಳು, ಸ್ಥಳೀಯರೊಂದಿಗೆ ಸಭೆ ನಡೆಸಿದಾಗಲೂ ಆತಂಕ ಹೊರಹಾಕಿದ್ದಾರೆ. ಪರಿಸರ ಹಾಳಾಗಿದೆ. ಮಕ್ಕಳನ್ನು ಓದಿಸಲಾಗುತ್ತಿಲ್ಲ. ಉದ್ಯಮಿಗಳು ಹೂಡಿಕೆ ಮಾಡಲು ಹಿಂಜರಿಯುತ್ತಿದ್ದಾರೆ ಎಂದಿದ್ದಾರೆ. ಶಾಂತಿ ಸಭೆ ಕೂಡ ನಡೆಸಿದ್ದೇವೆ. ಎಸ್ಎಎಫ್ ರಚನೆ ಬಳಿಕ ಎಲ್ಲವೂ ತಹಬದಿಗೆ ಬಂದಿವೆ. ಎಸ್ಎಎಫ್ ಶಾಶ್ವತ ಅಲ್ಲ. ನಕ್ಸಲ್ ನಿಗ್ರಹ ಪಡೆ ವಿಸರ್ಜಿಸಲು ಚಿಂತನೆ ನಡೆದಿದೆ. ಮನಸ್ಸುಗಳು ಒಂದಾಗಬೇಕು. ಜನಪ್ರತಿನಿಧಿಗಳ ಸಹಕಾರ ಅಗತ್ಯ. ಇಲ್ಲದಿದ್ದರೆ ಶಾಂತಿ ನೆಲೆಸಲು ಸಾಧ್ಯವಿಲ್ಲ. ಪಕ್ಕದ ಕೇರಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಆಗಿದೆ. ನಮ್ಮ ಸರ್ಕಾರವೂ ನಮ್ಮ ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಬೇಕೆಂದುಕೊಂಡಿದೆ ಎಂದರು.


















