ಕ್ರಿಕೇಟಿಗ ಎಂ.ಎಸ್ ಧೋನಿ ಹೂಡಿದ್ದ 100 ಕೋಟಿ ಮಾನನಷ್ಟ ಪ್ರಕರಣದ ವಿಚಾರಣೆಗೆ ಆದೇಶಿಸಿದ ಹೈಕೋರ್ಟ್!

ಭಾರತ ಕ್ರಿಕೆಟ್ ತಂಡದ ಮಾಜ ನಾಯಕ ಎಂ.ಎಸ್.ಧೋನಿ ಹೂಡಿದ್ದ 100 ಕೋಟಿ ರೂ. ಮಾನನಷ್ಟ ಪ್ರಕರಣದ ವಿಚಾರಣೆಗೆ ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ. ಧೋನಿ ಹೇಳಿಕೆ ಪಡೆಯಲು ಅಡ್ವೋಕೇಟ್ ಕಮಿಷನರ್​ ನೇಮಕಕ್ಕೂ ಆದೇಶ ನೀಡಿದೆ ಎಂದು ವರದಿಯಾಗಿದೆ. ಧೋನಿ ಸಲ್ಲಿಸಿದ್ದ ಮೊಕದ್ದಮೆ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್​ ನ್ಯಾ. ಸಿ.ವಿ.ಕಾರ್ತಿಕೇಯನ್ ವಿಚಾರಣೆಗೆ ಅನುಮತಿ ನೀಡಿದರು ಎನ್ನಲಾಗಿದೆ. ಇದೇ ವೇಳೆ ತನಿಖೆ ಸಹಕಾರ ನೀಡುವುದಾಗಿ ಧೋನಿ ಹೇಳಿದ್ದಾರೆ ಅವರ ಪರ ವಕೀಲರು ಗಮನಕ್ಕೆ ತಂದರು.

ಅಕ್ಟೋಬರ್ 20 ಮತ್ತು ಡಿಸೆಂಬರ್ 10 ರಂದು ತಾನು ವಿಚಾರಣೆಗೆ ಲಭ್ಯವಿರುವುದಾಗಿ ಧೋನಿ ಹೇಳಿದ್ದಾರೆ ಎಂದು ನ್ಯಾಯಾಧೀಶರಿಗೆ ತಿಳಿಸಿದರು. ಜನಸಂದಣಿ ಮತ್ತು ಅವ್ಯವಸ್ಥೆಯನ್ನು ತಪ್ಪಿಸಲು ಅಡ್ವೊಕೇಟ್ ಕಮಿಷನರ್ ಮೂಲಕ ಧೋನಿ ಹೇಳಿಕೆಯನ್ನು ದಾಖಲಿಸಲು ಅನುವು ಮಾಡಿದೆ.

ಏನಿದು ಪ್ರಕರಣ?
2014ರಲ್ಲಿ ಐಪಿಎಲ್​ ನಲ್ಲಿ ಮ್ಯಾಚ್​ ಫಿಕ್ಸಿಂಗ್ ನಡೆದಿದೆ. ಸಿಎಸ್​ಕೆ ತಂಡ ನಾಯಕರಾಗಿದ್ದ ಎಂ.ಎಸ್.ಧೋನಿ ಅದರಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕೆಲವು ಚಾನಲ್ ಮತ್ತು ಪತ್ರಕರ್ತರು ವರದಿ ಮಾಡಿದ್ದರು ಮತ್ತು ಡಿಬೆಟ್​ಗಳಲ್ಲಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ತಮ್ಮ ಖ್ಯಾತಿಗೆ ಧಕ್ಕೆ ತಂದ ಆರೋಪದ ಮೇಲೆ 2 ಪ್ರಮುಖ ಮಾಧ್ಯಮ ಚಾನೆಲ್ ಗಳು ಮತ್ತು ಪತ್ರಕರ್ತರ ವಿರುದ್ಧ 100 ಕೋಟಿ ರೂ. ಮಾನನಷ್ಟ ಪರಿಹಾರ ಕೋರಿ ಮೊಕದ್ದಮೆಯನ್ನು ಹೂಡಿದ್ದರು.