ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅವರ ಮನವಿಗೆ ಸ್ಪಂದಿಸಿ ವಿವಿಧ ಸಮಸ್ಯೆಗಳ ಕುರಿತು ಸಭೆ

ಮಂಗಳೂರು: ಕರ್ನಾಟಕ ವಿಧಾನ ಪರಿಷತ್ ಸದಸ್ಯ, ಶಾಸಕ ಮಂಜುನಾಥ ಭಂಡಾರಿರವರ ಮನವಿಯ ಮೇರೆಗೆ ಕರ್ನಾಟಕ ವಿಧಾನಸಭಾ ಸಭಾಧ್ಯಕ್ಷರಾದ ಯು. ಟಿ. ಖಾದರ್ ಅವರು ಉಭಯ ಜಿಲ್ಲೆಗಳಲ್ಲಿರುವ ಪ್ರಮುಖ ಸಮಸ್ಯೆಗಳಾದ ಕೆಂಪು ಕಲ್ಲು ಮತ್ತು ಮರಳುಗಾರಿಕೆ ವಿನ್ಯಾಸ ಬಡಾವಣೆ ಅನುಮೋದನೆ ಹಾಗೂ ಈ ಸ್ವತ್ತು 9/11 ಇವುಗಳ ಬಗ್ಗೆ ಇರು ಸಮಸ್ಯೆಗಳನ್ನು ಬಗೆ ಹರಿಸಲು ಸಭೆ ಕರೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ ಅವರಿಗೆ ಸಚಿವರ ಸಭೆ ಏರ್ಪಡಿಸುವಂತೆ ನಿರ್ದೇಶನ ನೀಡಿದ್ದಾರೆ. ಈ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲಾ ಉಸ್ತುವಾರಿ ಸಚಿವರು ದಿನಾಂಕ ಆಗಸ್ಟ್ 12 ರಂದು ಗಣಿ ಇಲಾಖೆಯ ಸಮಸ್ಯೆಗಳ (ಕೆಂಪು ಕಲ್ಲು ಮತ್ತು ಮರಳುಗಾರಿಕೆ) ಕುರಿತು ಮಧ್ಯಾಹ್ನ 1.30 ಗಂಟೆಗೆ, ದಕ್ಷಿಣ ಕನ್ನಡ ಜಿಲ್ಲೆಯ ವಿನ್ಯಾಸ ಬಡಾವಣೆ ಅನುಮೋದನೆ ಹಾಗೂ ಈ ಸ್ವತ್ತು 9/11 ಕುರಿತು ಮಧ್ಯಾಹ್ನ 2.30 ಗಂಟೆಗೆ ವಿಧಾನ ಸೌಧದಲ್ಲಿ ಸಭೆ ಏರ್ಪಡಿಸಿದ್ದಾರೆ.

ಸಭೆಯಲ್ಲಿ ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್, ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕಾ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ, ಕಂದಾಯ ಸಚಿವರಾದ ಕೃಷ್ಣ ಬೈರೆಗೌಡ ಹಾಗೂ ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ಕರಾವಳಿ ಜಿಲ್ಲೆಯ ಎಲ್ಲಾ ಶಾಸಕರುಗಳು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಪ್ರಮುಖ ಅಧಿಕಾರಿಗಳು ಉಪಸ್ಥಿತರಿರುತ್ತಾರೆ ಎಂದು ಮಂಜುನಾಥ ಭಂಡಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.