ಅಗಸ್ಟ್ 26ಕ್ಕೆ ‘ಉದಯಗಿರಿ’ ಹಾಗೂ ‘ಹಿಮಗಿರಿ’ ಯುದ್ಧನೌಕೆಗಳು ನೌಕಾಪಡಕ್ಕೆ ಸೇರ್ಪಡೆ.

ನವದೆಹಲಿ: ರಹಸ್ಯ ಕಾರ್ಯಾಚರಣೆ ಉದ್ದೇಶದ ‘ಉದಯಗಿರಿ’ ಹಾಗೂ ‘ಹಿಮಗಿರಿ’ ಯುದ್ಧನೌಕೆಗಳನ್ನು ವಿಶಾಖಪಟ್ಟಣದಲ್ಲಿ ಆಗಸ್ಟ್‌ 26ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ನೌಕಾಪಡೆಗೆ ಸೇರ್ಪಡೆ ಮಾಡಲಾಗುವುದು ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.‘ಪ್ರಾಜೆಕ್ಟ್‌ 17ಎ’ ಭಾಗವಾಗಿ ಈ ನೌಕೆಗಳನ್ನು ನಿರ್ಮಿಸಲಾಗಿದೆ. ಈ ಯೋಜನೆ ಭಾಗವಾಗಿ ನಿರ್ಮಿಸಿರುವ ಮೊದಲ ಯುದ್ಧನೌಕೆ ‘ನೀಲಗಿರಿ’ಯನ್ನು ಜನವರಿಯಲ್ಲಿ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೌಕಾಪಡೆಗೆ ಸೇರ್ಪಡೆ ಮಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು.

ಈ ಯುದ್ಧನೌಕೆಯನ್ನು ಮಜಗಾಂವ್‌ ಡಾಕ್‌ ಶಿಪ್‌ ಬಿಲ್ಡರ್ಸ್ ಲಿಮಿಟೆಡ್ (ಎಂಡಿಎಲ್‌) ನಿರ್ಮಿಸಿದೆ. ಇದೇ ಶ್ರೇಣಿಯ ಎರಡನೇ ಯುದ್ಧನೌಕೆ ‘ಉದಯಗಿರಿ’ಯನ್ನು ಎಂಡಿಎಲ್‌ ನಿರ್ಮಿಸಿದ್ದು, ಜುಲೈ 1ರಂದು ನೌಕಾಪಡೆಗೆ ಹಸ್ತಾಂತರಿಸಲಾಗಿತ್ತು ಎಂದು ನೌಕಾಪಡೆಯ ವಕ್ತಾರ ತಿಳಿಸಿದ್ದಾರೆ.

‘ಪ್ರಾಜೆಕ್ಟ್‌ 17ಎ’ ಭಾಗವಾಗಿ ಮತ್ತೊಂದು ಯುದ್ಧನೌಕೆ ‘ಹಿಮಗಿರಿ’ಯನ್ನು ಕೋಲ್ಕತ್ತದ ಗಾರ್ಡನ್‌ ರೀಚ್ ಶಿಪ್‌ ಬಿಲ್ಡರ್ಸ್ ಆ್ಯಂಡ್‌ ಎಂಜಿನಿಯರ್ಸ್‌(ಜಿಆರ್‌ಎಸ್‌ಇ) ಕಂಪನಿಯು ನಿರ್ಮಿಸಿದೆ.

ವೈಶಿಷ್ಟ್ಯಗಳು:

  • ‘ಉದಯಗಿರಿ’ಯು ನೌಕಾಪಡೆಯ ‘ವಾರ್‌ಶಿಪ್‌ ಡಿಸೈನ್ ಬ್ಯುರೊ’ ವಿನ್ಯಾಸ ಮಾಡಿರುವ 100ನೇ ಯುದ್ಧ ನೌಕೆಯಾಗಿದೆ
  • ಈ ಮೊದಲಿನ ಯುದ್ಧ ನೌಕೆಗಳಿಗಿಂತ (ಶಿವಾಲಿಕ್ ಶ್ರೇಣಿಯ ಯುದ್ಧನೌಕೆಗಳು) ಈ ನೂತನ ಯುದ್ಧ ನೌಕೆಗಳು ಶೇ 5ರಷ್ಟು ದೊಡ್ಡದಾಗಿವೆ
  • ನೆಲದಿಂದ ನೆಲಕ್ಕೆ ನೆಲದಿಂದ ಆಗಸಕ್ಕೆ ಚಿಮ್ಮುವ ಸೂಪರ್‌ಸಾನಿಕ್ ಕ್ಷಿಪಣಿಗಳು ಜಲಾಂತರ್ಗಾಮಿ ನಿರೋಧಕ ವ್ಯವಸ್ಥೆಗಳನ್ನು ಈ ಯುದ್ಧ ನೌಕೆಗಳಲ್ಲಿ ಅಳವಡಿಸಬಹುದು
  • ಈ ಯುದ್ಧ ನೌಕೆಗಳ ನಿರ್ಮಾಣ ಕಾರ್ಯದಲ್ಲಿ 200ಕ್ಖೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ) ಭಾಗಿಯಾಗಿದ್ದವು. ಇವುಗಳಿಂದ 4 ಸಾವಿರ ನೇರ ಮತ್ತು 10 ಸಾವಿರಕ್ಕೂ ಅಧಿಕ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದವು.