ಶಿವಮೊಗ್ಗ: ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52ರ ಬಾಳೆಬರೆ ಘಾಟ್ (ಹುಲಿಕಲ್ ಘಾಟ್) ರಸ್ತೆಯಲ್ಲಿ ಭೂ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಹಾಗೂ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಸೂಚಿಸಿ ತಾತ್ಕಾಲಿಕ ಆದೇಶವನ್ನು ಶಿವಮೊಗ್ಗದ ಜಿಲ್ಲಾಧಿಕಾರಿಯವರು ಹೊರಡಿಸಿದ್ದಾರೆ.
ತೀರ್ಥಹಳ್ಳಿ -ಕುಂದಾಪುರ ರಾಜ್ಯ ಹೆದ್ದಾರಿ 52 ಬಾಳೆಬರೆ ಘಾಟ್ (ಹುಲಿಕಲ್ ಘಾಟ್)ನ 42.10ರಿಂದ 42.20ರಲ್ಲಿನ ಹೇರ್‌ಪಿನ್ ತಿರುವಿನಲ್ಲಿ ಮೇ ಅಂತ್ಯದಲ್ಲಿ ಬಿದ್ದಂತಹ ಮಳೆಯಿಂದ ಕಾಂಕ್ರಿಟ್ ರಸ್ತೆಯ ಕೆಳಭಾಗದಲ್ಲಿ ಮಣ್ಣಿನ ಕುಸಿತ ಉಂಟಾಗಿದ್ದು, ಮತ್ತೆ ಮಳೆ ಚುರುಕುಗೊಂಡಿರುವುದರಿಂದ ಮಣ್ಣು ಮತ್ತೆ ಕುಸಿಯುವ ಸಂಭವವಿರುವುದರಿಂದ, ಸುರಕ್ಷತಾ ದೃಷ್ಟಿಯಿಂದ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52 ರ ಬಾಳೆಬರೆ ಘಾಟಿ ಮಾರ್ಗ ವ್ಯಾಪ್ತಿಯಲ್ಲಿ (ಮಾಸ್ತಿಕಟ್ಟೆಯಿಂದ ಹೊಸಂಗಡಿಯವರೆಗೆ) ತಾತ್ಕಾಲಿಕವಾಗಿ ಮಳೆಗಾಲದವರೆಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಹಾಗೂ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ತಾತ್ಕಾಲಿಕವಾಗಿ ಜಿಲ್ಲಾಧಿಕಾರಿ ಆದೇಶವನ್ನು ಹೊರಡಿಸಿದ್ದಾರೆ.ಬದಲಿ ಮಾರ್ಗಗಳು
*ತೀರ್ಥಹಳ್ಳಿಯಿಂದ ಕುಂದಾಪುರ ಕಡೆಗೆ ರಾಜ್ಯ ಹೆದ್ದಾರಿ-52ರಲ್ಲಿ ಹೋಗುವ ಭಾರಿ ವಾಹನಗಳು ಈಗಿನ ತೀರ್ಥಹಳ್ಳಿ-ರಾವೆ ಕಾನುಗೋಡು ಮಾಸ್ತಿಕಟ್ಟೆ-ಹುಲಿಕಲ್ ಘಾಟ್-ಹೊಸಂಗಡಿ-ಸಿದ್ದಾಪುರ ರಸ್ತೆ ಬದಲು ಪರ್ಯಾಯ ಮಾರ್ಗವಾಗಿ ತೀರ್ಥಹಳ್ಳಿ-ರಾವೆ ಕಾನುಗೋಡು-ನಗರ -ಕೊಲ್ಲೂರು ಮೂಲಕ ಕುಂದಾಪುರ ರಸ್ತೆ ಸೇರಬಹುದು.
ನಗರ ಸಿದ್ದಾಪುರ ರಾಜ್ಯ ಹೆದ್ದಾರಿ-278 ರಸ್ತೆ ತೀರ್ಥಹಳ್ಳಿಯಿಂದ ಯಡೂರು ಹುಲಿಕಲ್ ಕುಂದಾಪುರ ಕಡೆ ಹೋಗುವ ಭಾರಿ ವಾಹನಗಳು ಪರ್ಯಾಯ ಮಾರ್ಗವಾಗಿ ತೀರ್ಥಹಳ್ಳಿ ಯಡೂರು- ಮಾಸ್ತಿಕಟ್ಟೆ- ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರಕ್ಕೆ ತೆರಳಬಹುದು.ಶಿವಮೊಗ್ಗ/ ಸಾಗರ ಕಡೆಯಿಂದ ಹೊಸನಗರದ ಮೂಲಕ ಕುಂದಾಪುರ ಕಡೆ ಹೋಗುವ ಭಾರಿ ವಾಹನಗಳು ಪರ್ಯಾಯ ಮಾರ್ಗವಾಗಿ ಶಿವಮೊಗ್ಗ ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಮೂಲಕ ಹೊನ್ನಾವರ ಅನಂತರ ಹೊನ್ನಾವರದಿಂದ-ಭಟ್ಕಳ-ಬೈಂದೂರು-ಕುಂದಾಪುರಕ್ಕೆ ತೆರಳಬಹುದು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.












