ಕುಂದಾಪುರ: ಸದಾ ಜನರ ಸೇವೆಯಲ್ಲಿ ಸಂತೃಪ್ತಿ ಪಡೆಯುವ ವಿಶಾಲ ಮನೋಭಾವದ ಹಾಲಾಡಿ ಶ್ರೀನಿವಾಸ ಶೆಟ್ಟರು ಜನರ ನಡುವೆ ಇರಬೇಕು ಎಂದು ಬಯಸುತ್ತಾರೆ. ಹೆಚ್ಚು ಮಾತನಾಡದ ಹಾಲಾಡಿಯವರು ಖಂಡಿತಾ ಮಂತ್ರಿಗಳಾಗುತ್ತಾರೆ. ಆದರೆ ಹಿಂದೆ ಉಳಿಯುವ ಅವರ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಶ್ರೀರಾಮುಲು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರಿಗೆ ಕಿವಿಮಾತು ಹೇಳಿದ್ದಾರೆ.
ಕುಂದಾಪುರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಉಡುಪಿ ಅಂಬಲಪಾಡಿಯ ಜಿ.ಶಂಕರ್ಫ್ಯಾಮಿಲಿ ಟ್ರಸ್ಟ್ವತಿಯಿಂದ ಅಂದಾಜು ೬ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ೧೫೦ ಹಾಸಿಗೆಗಳ ದಿ.ಲಕ್ಷ್ಮೀ ಸೋಮ ಬಂಗೇರ ನೂತನ ಹೆರಿಗೆ ಆಸ್ಪತ್ರೆಯ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರು ಮಂತ್ರಿಯಾಗುತ್ತಾರೆ ಎಂದು ಸಚಿವ ಶ್ರೀರಾಮುಲು ನುಡಿದಾಗ, ತಕ್ಷಣವೇ ಪ್ರತಿಸ್ಪಂದಿಸಿದ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ನನ್ನ ಆಯಸ್ಸನ್ನು ಹೆಚ್ಚಿಸಲು ನಿಮಗೆ ಸಾಧ್ಯವಾ ಎಂದು ಪರೋಕ್ಷವಾಗಿ ಮಂತ್ರಿಗಿರಿ ದೂರ ಇದೆ ಎನ್ನುವ ನೋವನ್ನು ಹಾಲಾಡಿ ಬಹಿರಂಗವಾಗಿ ಹೊರಹಾಕಿದರು.
ಮತ್ತೆ ತಮ್ಮ ಮಾತನ್ನು ಮುಂದುವರೆಸಿದ ಸಚಿವರು, ನಾವೆಲ್ಲರೂ ಮುಂದೆ ಬಂದುನಿಂತು ಉದ್ಘಾಟನೆ ಮಾಡುತ್ತಿದ್ದರೆ ಶ್ರೀನಿವಾಸ ಶೆಟ್ಟಿಯವರು ಹಿಂದೆ ಹಿಂದೆ ಸರಿದು ಜನರ ನಡುವೆ ನಿಲ್ಲುತ್ತಾರೆ. ನಾಳೆ ಅವರು ಮಂತ್ರಿಗಳಾದರೆ ಅವರೇ ಉದ್ಘಾಟನೆ ಮಾಡಬೇಕಾಗುತ್ತದೆ. ಆ ಸಮಯದಲ್ಲಿ ಅವರು ಹಿಂದೆ ಹೋದರೆ ಜನರು ಒಪ್ಪಿಕೊಳ್ಳೋದಿಲ್ಲ. ಮೊದಲಿನಿಂದಲೂ ಜನರ ಮಧ್ಯೆ ಇದ್ದ ಹಾಲಾಡಿಯವರು, ಸತತವಾಗಿ ಐದು ಬಾರಿ ಶಾಸಕರಾಗಿ ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ ಎಂದು ಶಾಸಕ ಹಾಲಾಡಿಯವರನ್ನು ಹಾಡಿಹೊಗಳಿದರು.
ಶೆಟ್ರು ಏನ್ ಹೇಳಿದ್ರು?
ತಮ್ಮ ಭಾಷಣದ ವೇಳೆಯಲ್ಲಿ ಸಚಿವರ ಮಾತಿಗೆ ಪ್ರತಿಕ್ರಿಯಿಸಿರುವ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು, ಯೋಜನೆಗಳಿಗೆ ವೆಚ್ಚ ಮಾಡುವ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿ ಮಾಡುವ ಕಾರ್ಯಕ್ರಮಗಳಿಗೆ ಹೋಗಬಾರದು ಎನ್ನುವ ತೀರ್ಮಾನವನ್ನು ವಿದ್ಯಾರ್ಥಿ ಜೀವನದಿಂದಲೇ ಕೈಗೊಂಡಿದ್ದೇನೆ. ಹೀಗಾಗಿ ಶಂಕುಸ್ಥಾಪನೆ, ಕಟ್ಟಡ ಉದ್ಘಾಟನೆಗಳಂತಹ ಕಾರ್ಯಕ್ರಮಕ್ಕೆ ಹೋಗದೆ ಮನೆಯಲ್ಲೇ ಕೂತು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದೇನೆ. ಹೆಚ್ಚು ಮಾತನಾಡಿ ಸಮಯ ವ್ಯರ್ಥ ಮಾಡುವ ಮನಸ್ಸು ನನಗಿಲ್ಲ. ಮಾತನಾಡಲೇಬೇಕಾದರೆ ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಬಗ್ಗೆಯೂ ಮೂರು ಗಂಟೆಯೂ ಮಾತನಾಡುವೆ ಎಂದು ಎಂದಿನಂತೆ ತಮ್ಮ ಹಾಸ್ಯಚಟಾಕಿಯನ್ನು ಹಾರಿಸುವುದರ ಮೂಲಕ ಹಾಲಾಡಿ ಶ್ರೀನಿವಾಸ ಶೆಟ್ಟರು ನೆರೆದಿರುವ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.