ಧರ್ಮಸ್ಥಳ ಪ್ರಕರಣ: ಸೋಮವಾರದ ಕಾರ್ಯಾಚರಣೆಯಲ್ಲಿ ಮೂರು ಕಳೇಬರ ಪತ್ತೆ; ಸುಜಾತಾ ಭಟ್ ಪರ ವಕೀಲರ ಹೇಳಿಕೆ

ಮಂಗಳೂರು: ಸೋಮವಾರ (ಆ.4) ಎಸ್ ಐ ಟಿ ಕಾರ್ಯಾಚರಣೆಯ ವೇಳೆ ಕನಿಷ್ಠ ಮೂರು ಕಳೇಬರ ಪತ್ತೆಯಾಗಿದೆ ಅದರಲ್ಲಿ ಒಂದು ಕಳೇಬರ ಮಹಿಳೆಯದ್ದಾಗಿದೆ ಎಂದು, ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಅವರ ಪರ ವಕೀಲ ಮಂಜುನಾಥ್ ಎನ್ ಅವರು ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿನ್ನೆಯ ದಿನ ದೂರುದಾರ ಸಾಕ್ಷಿ ಗುರುತಿಸಿರುವ ಸ್ಥಳ ಸಂಖ್ಯೆ 11 ರ ಪ್ರದೇಶದಿಂದ ಸುಮಾರು 100 ಮೀಟರ್ ದೂರದ ಅರಣ್ಯ ಪ್ರದೇಶದಲ್ಲಿ, ಸುಮಾರು 100 ಅಡಿ ಎತ್ತರದ ಗುಡ್ಡದ ಮೇಲೆ, ಉತ್ಖನನದ ಬಳಿಕ ಕನಿಷ್ಟ ಮೂರು ವ್ಯಕ್ತಿಗಳ ಕಳೇಬರಗಳು ಪತ್ತೆಯಾಗಿದ್ದು, ಅದರಲ್ಲಿನ ಒಂದು ಕಳೇಬರವು ಮಹಿಳೆಯದಾಗಿದೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿಯೇ ಮಹಿಳೆಯ ಸೀರೆಯೂ ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಪ್ರದೇಶಕ್ಕೆ ತೆರಳಿದ್ದ ತಂಡದ ಕೆಲವರು ಗುಡ್ಡವನ್ನು ಏರುವಾಗ ಜಾರಿಬಿದ್ದು ಗಾಯಗೊಂಡರು ಎಂದು ತಿಳಿದುಬಂದಿದೆ. ದೂರುದಾರನಾದ ಭೀಮ ಮೊದಲು ಗುರುತಿಸಿದ್ದ ಸ್ಥಳ ಸಂಖ್ಯೆ 11ರ ಬದಲು, ಅದರ ಪಕ್ಕಕ್ಕೆ ಕರೆದೊಯ್ಯಲು ಆತನಿಗೆ SIT ತಂಡವು ಅವಕಾಶ ನೀಡಿದ್ದರಿಂದಲೇ ಸೋಮವಾರದ ಕಾರ್ಯಾಚರಣೆ ಯಶಸ್ವಿಯಾಯಿತೆಂದು ಹೇಳಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೂರುದಾರ ಸಾಕ್ಷಿಯೂ ಮೊದಲ ದಿನ ಗುರುತು ಮಾಡಿದ ಸ್ಥಳದಲ್ಲಿಯೇ ಅಗೆಯಬೇಕು, ಅಲ್ಲಿಂದಲೇ ಕಳೆ ಬರಗಳನ್ನು ಹೊರ ತೆಗೆಯಬೇಕು ಎನ್ನುವುದು ವೈಜ್ಞಾನಿಕ ಮಾತ್ರವಲ್ಲ, ನಿರರ್ಥಕವೂ ಹೌದು. ಮೊದಲ ದಿನ ತೋರಿಸಿದ್ದ ಜಾಗಗಳನ್ನು ಗುರುತಿಸಲು ಸ್ವಾತಂತ್ರ್ಯವಿರುವ ವ್ಯಕ್ತಿಗೆ, ತಾನು ಮೊದಲು ಗುರುತಿಸಿದ್ದು ತಪ್ಪಾಗಿರಬಹುದೆಂದು ತಿದ್ದಿಕೊಳ್ಳಲು ಸಹಜ ಸ್ವಾತಂತ್ರ್ಯವೂ ಇದೆ. ಈ ನಿಟ್ಟಿನಲ್ಲಿ ಈವರೆಗಿನ ಎಸ್‌ಐಟಿಯ ಮತ್ತು ಶೋಧಕಾರ್ಯವನ್ನು ಮುನ್ನಡೆಸುತ್ತಿರುವ ತಂಡದ ಕಾರ್ಯಕ್ಷಮತೆಯು ಶ್ಲಾಘನೀಯ ಎಂದು ಸುಜಾತ ಭಟ್ ಪರ ವಕೀಲ ಮಂಜುನಾಥ್ ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.