“ಸ್ವರ್ಗದಲ್ಲಿ ನಾನು ಖುಷಿಯಾಗಿದ್ದೇನೆ, ಅಳಬೇಡಿ” ಡೆತ್ ನೋಟ್ ಬರೆದಿಟ್ಟು 7ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ.!

                                                                                           ಬೆಂಗಳೂರು: ಬೆಂಗಳೂರಿನಲ್ಲಿ 13 ವರ್ಷದ ಬಾಲಕನೊಬ್ಬ 'ನನ್ನನ್ನು ಕ್ಷಮಿಸಿ ಎಂದು ಡೆತ್‌ ನೋಟ್‌ ಬರೆದಿಟ್ಟು, ಗಿಟಾರ್ ತಂತಿ ಕಿತ್ತು, ಅದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ನಡೆದಿದೆ. 

ಆತ್ಮಹತ್ಯೆಗೆ ಶರಣಾದ ಬಾಲಕ 7ನೇ ತರಗತಿ ವಿದ್ಯಾರ್ಥಿ ಗಾಂಧಾರ್(13).

ಮೃತದೇಹವನ್ನ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಧಾರ್​ನ ತಂದೆ ಮ್ಯೂಸಿಕ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಸವಿತಾ ಖ್ಯಾತ ಜಾನಪದ ಗಾಯಕಿಯಾಗಿದ್ದಾರೆ. ಸವಿತಾ ಅವರು ಕಳೆದ ಶುಕ್ರವಾರ ಜಾನಪದ ಕಾರ್ಯಕ್ರಮದ ಹಿನ್ನಲೆ ಆಸ್ಟ್ರೇಲಿಯಾಗೆ ಹೋಗಿದ್ದರು. ಇದೀಗ ತಾಯಿ ವಾಪಸ್​​ ಆಗಬೇಕಿದೆ. ಇನ್ನೂ ತಾಯಿ ಬೆಂಗಳೂರಿಗೆ ಬರುವ ತನಕ ಮರಣೋತ್ತರ ಪರೀಕ್ಷೆ ನಡೆಸದೇ ಇರುವಂತೆ ತೀರ್ಮಾನ ಕೈಗೊಳ್ಳಲಾಗಿದೆ.

ಗುಡ್​ಬೈ ಅಮ್ಮ:
ಆತ್ಮಹತ್ಯೆಗೂ ಮುನ್ನ ಗಾಂಧಾರ್​ ಡೆತ್​ನೋಟ್​ ಬರೆದಿದ್ದು, ಅದರಲ್ಲಿ ಪ್ರೀತಿಯ ಕುಟುಂಬ ಸದಸ್ಯರೇ, ಈ ಪತ್ರ ಯಾರೆಲ್ಲ ಓದುತ್ತಿದ್ದೀರಾ ಅವರು ಅಳಬೇಡಿ. ಈಗಾಗಲೇ ನಾನು ಸ್ವರ್ಗದಲ್ಲಿದ್ದೇನೆ. ನನ್ನನ್ನು ತಪ್ಪಾಗಿ ತಿಳಿದುಕೊಳ್ಳಬೇಡಿ. ನಿಮ್ಮ ಈಗಿನ ಸ್ಥಿತಿ ಹೇಗಿದೆ ಅನ್ನೋದು ನನಗೆ ಗೊತ್ತು. ನಿಮಗೆ ನೋವಾಗುತ್ತೆ ಅನ್ನೋದು ನನಗೆ ಚೆನ್ನಾಗಿ ಗೊತ್ತಿದೆ. ಈ ಮನೆ ಚೆನ್ನಾಗಿರಬೇಕೆಂದು ನಾನು ಈ ನಿರ್ಧಾರ ತೆಗೆದುಕೊಂಡೆ. ನನ್ನ ಮೇಲೆ ನಿಮಗೆ ಕೋಪ ಬರುವಂತೆ ನಡೆದುಕೊಂಡೆ, ನನ್ನಿಂದ ನೀವು ತುಂಬಾ ನೊಂದಿದ್ದೀರಾ, ಆದರೆ ನನ್ನ ಉದ್ದೇಶ ನಿಮ್ಮನ್ನು ನೋಯಿಸುವುದಾಗಿಲ್ಲ, ನನ್ನ ಮೇಲೆ ನಿಮಗೆ ಕೋಪ ಇದ್ದರೆ ಕ್ಷಮೆ ಕೇಳುತ್ತೇನೆ. ನನ್ನ ತಪ್ಪುಗಳನ್ನು ನೀವು ಕ್ಷಮಿಸಿ. 14 ವರ್ಷಗಳಲ್ಲಿ ನಾನು ಖುಷಿಯ ಕ್ಷಣ ಕಳೆದಿದ್ದೇನೆ ಅದೇ ಸಾಕು. ಸ್ವರ್ಗದಲ್ಲಿ ನಾನು ಖುಷಿಯಾಗಿದ್ದೇನೆ. ನಾನು ನನ್ನ ಸ್ನೇಹಿತರನ್ನು ಪ್ರೀತಿಸುತ್ತಿದ್ದೆ ಎಂದು ಅವರಿಗೆ ತಿಳಿಸಿ. ನನ್ನ ಶಾಲಾ ಸ್ನೇಹಿತರಿಗೂ ಈ ಮಾತನ್ನ ಹೇಳಿ. ಐ ಮಿಸ್ ಯೂ ಆಲ್- ಗುಡ್​ಬೈ ಅಮ್ಮ ಎಂದು ಡೆತ್​ನೋಟ್​​ನಲ್ಲಿ ಬರೆಯಲಾಗಿದೆ.