ಉಡುಪಿ:ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸ್ತನ್ಯಪಾನ ಅವಶ್ಯಕ : ಡಾ.ಅಶೋಕ್ ಹೆಚ್

ಉಡುಪಿ: ಸ್ತನ್ಯಪಾನವು ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಪೂರಕವಾದ ಸಮತೋಲಿತ ಪೂರ್ಣ
ಆಹಾರವಾಗಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸ್ತನ್ಯಪಾನ ಅವಶ್ಯಕ ಎಂದು ಜಿಲ್ಲಾ ಸರ್ಜನ್ ಡಾ.ಅಶೋಕ್ ಹೆಚ್ ಹೇಳಿದರು.

ಅವರು ಶುಕ್ರವಾರ ನಗರದ ಸರಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ ಉಡುಪಿ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ- ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸ್ತನ್ಯಪಾನ ಮಾಡುವುದು ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಠಿಯಿಂದ ಬಹುಮುಖ್ಯ. ಸ್ತನ್ಯಪಾನದಿಂದ ಪ್ರತೀವರ್ಷ ವಿಶ್ವದಾದ್ಯಂತ 8 ಲಕ್ಷ ಮಕ್ಕಳ ಜೀವ ಉಳಿಸಲು ಸಾಧ್ಯತೆ ಇದೆ ಎಂದರು.

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಜ್ಯೋತ್ಸ್ನಾ.ಬಿ.ಕೆ, ಪ್ರಾಸ್ತಾವಿಕವಾಗಿ ಮಾತನಾಡಿ, ತಾಯಿಯ ಹಾಲು ನೀಡುವುದರಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ ಎಂಬುದು ಈ ವರ್ಷದ ಘೋಷವಾಕ್ಯವಾಗಿದ್ದು, ಪ್ರತೀ ವರ್ಷ ಆಗಸ್ಟ್ 1 ರಿಂದ 7 ರವರೆಗೆ ಜಾಗತಿಕ ಮಟ್ಟದಲ್ಲಿ ಈ ಸಪ್ತಾಹವನ್ನು ಆಚರಿಸಿ ಅರಿವು ಕಾರ್ಯಕ್ರಮ ಹಾಗೂ ಇನ್ನಿತರೆ ಆರೋಗ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಮಗು ಜನಿಸಿದ ಒಂದು ಗಂಟೆಯೊಳಗೆ ಎದೆಹಾಲನ್ನು ನೀಡಬೇಕು. ಆರು ತಿಂಗಳವರೆಗೆ ಎದೆ ಹಾಲನ್ನಲ್ಲದೆ ಬೇರೆ ಯಾವುದೇ ಆಹಾರ ನೀಡಬಾರದು. ಎರಡು ವರ್ಷದವರೆಗೆ ಇದನ್ನು ಮುಂದುವರೆಸಬೇಕು. ಮಗುವಿಗೆ ಆರು ತಿಂಗಳ ನಂತರ ಪೂರಕ ಆಹಾರವನ್ನು ನೀಡಲು ಪ್ರಾರಂಭಿಸಬೇಕು ಎಂದರು.

ಪ್ರಸೂತಿ ತಜ್ಞೆ ಡಾ.ಕವಿತಾ ಮಾತನಾಡಿ, ತಾಯಿಯ ಎದೆ ಹಾಲಿನಲ್ಲಿರುವ ಪ್ರೋಟೀನ್ ಮಗುವಿನ ಮೆದುಳಿನ ಬೆಳವಣಿಗೆಗೆ ಅತೀ ಅವಶ್ಯಕ.ಸ್ತನ್ಯಪಾನವು ಮಕ್ಕಳ ಬುದ್ಧಿಮಟ್ಟವನ್ನು ಚುರುಕುಗೊಳಿಸುದಲ್ಲದೇ ಮುಂಬರುವ ಧೀರ್ಘಕಾಲದ ಕಾಯಿಲೆಗಳನ್ನು ತಡೆಗಟ್ಟುತ್ತದೆ.ಎಲ್ಲಕ್ಕಿಂತ ಹೆಚ್ಚಾಗಿ ತಾಯಿ ಮಗುವಿನ ಭಾಂದವ್ಯ ವೃದ್ಧಿಯಾಗುತ್ತದೆ. ತಾಯಿಗೆ ಸ್ತನ ಕ್ಯಾನ್ಸರಿನಿಂದ ರಕ್ಷಣೆ ಸಿಗುತ್ತದೆ ಎಂದರು.

ಮಕ್ಕಳ ತಜ್ಞ ಡಾ.ಮಹಾದೇವ್ ಭಟ್ ಮಾತನಾಡಿದರು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜ್ ಗೋಪಾಲ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಅಮರ್‌ನಾಥ್ ಶಾಸ್ತ್ರಿ, ಡಾ.ಸಂದೀಪ್, ಪ್ರಸೂತಿ ತಜ್ಞೆ ಡಾ.ಉಷಾ ಭಟ್, ಕಾರ್ಯಕ್ರಮ ವ್ಯವಸ್ಥಾಪಕ ಪ್ರೀತಮ್, ಜಿಲ್ಲಾ ಲೆಕ್ಕಪತ್ರ ವ್ಯವಸ್ಥಾಪಕ ಗಿರೀಶ್ ಕಡ್ಡಿಪುಡಿ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ ನಿರೂಪಿಸಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಸುಧೀಂದ್ರ ವಂದಿಸಿದರು.