ಆಯುಷ್ಮಾನ್‌ ಭಾರತ್‌ ನ ನಿಯಮಾವಳಿಗಳಲ್ಲಿ ಇರುವ ಗೊಂದಲ ಬಗೆಹರಿಸುವೆ:ಸಚಿವ ಶ್ರೀರಾಮುಲು ಭರವಸೆ

ಕುಂದಾಪುರ : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾ  ಆಯುಷ್ಮಾನ್‌ ಭಾರತ್‌ ನ ನಿಯಮಾವಳಿಗಳಲ್ಲಿ ಇರುವ ಗೊಂದಲಗಳಿಂದಾಗಿ ಒಳ್ಳೆಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವ ರೋಗಿಗಳಿಗೆ ತೊಂದರೆಗಳಾಗುತ್ತಿದೆ ಎನ್ನುವುದನ್ನು ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ರಘುಪತಿ ಭಟ್‌ ಅವರು ನನ್ನ ಗಮನಕ್ಕೆ ತಂದಿದ್ದಾರೆ. ಈ ಸಮಸ್ಯೆಗಳನ್ನು ಬಗೆ ಹರಿಸಿ ಯೋಜನೆಯ ಪ್ರತಿಫಲ ಎಲ್ಲರಿಗೂ ಸರಳ ರೀತಿಯಲ್ಲಿ ದೊರಕಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಹಾಗೂ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಭರವಸೆ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ನಮ್ಮ ರಾಜ್ಯದವರು ಹೊರ ರಾಜ್ಯಕ್ಕೆ ಹೋದಾಗ ಹಾಗೂ ಹೊರ ರಾಜ್ಯದವರು ಬೇರೆ ರಾಜ್ಯಗಳಿಗೆ ಬಂದಾಗ ಚಿಕಿತ್ಸೆಗಾಗಿ ಆಧಾರ ಕಾರ್ಡ್, ಪಡಿತರ ಚೀಟಿ ಹಾಗೂ ಮತದಾರರ ಗುರುತು ಚೀಟಿಗಳನ್ನು ಹಿಡಿದುಕೊಂಡು ಆಸ್ಪತ್ರೆಗಳಿಗೆ ತೆರಳಿದಾಗ, ಆಸ್ಪತ್ರೆಯಲ್ಲಿ ಆಯುಷ್ಮಾನ್‌ಯೋಜನೆಯಡಿ ನಿಮಗೆ ಚಿಕಿತ್ಸೆ ಸೌಲಭ್ಯ ನೀಡಲು ಬರುವುದಿಲ್ಲ ಇದಕ್ಕೆ ತಾಂತ್ರಿಕ ತೊಂದರೆ ಇದೆ ಎಂದು ಆಸ್ಪತ್ರೆಯವರು ಹೇಳುತ್ತಿದ್ದಾರೆ ಎನ್ನುವುದನ್ನು ಸುದ್ದಿಗಾರರು ಸಚಿವರ ಗಮನಕ್ಕೆ ತಂದರು.

ಇದಕ್ಕೆ ಪ್ರತಿ ಸ್ಪಂದಿಸಿದ ಅವರು, ಆಯುಷ್ಮಾನ್‌ ಯೋಜನೆಗಾಗಿ ಇರುವ ೩.ಎ ರೆಫರಲ್( ಶಿಫಾರಾಸು ಪತ್ರ) ಪದ್ದತಿಯನ್ನು ತೆಗೆದು ಹಾಕಿ ರೋಗಿಗಳಿಗೆ ಅನೂಕೂಲವಾಗುವಂತೆ ಸರಳೀಕರಣ ಮಾಡಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಬೇರೆ ಬೇರೆ ರಾಜ್ಯದಲ್ಲಿಯೂ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಲು ಇರುವ ತಾಂತ್ರಿಕ ಸಮಸ್ಯೆಯನ್ನು ತಿಳಿದುಕೊಂಡು ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಗುವುದು ಎಂದರು.

ಗೌರವ ಧನ ;ಸೂಕ್ತ ತೀರ್ಮಾನ

ಕುಂದಾಪುರ ಹಾಗೂ ಬೈಂದೂರು ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆ ಹಾಗೂ ಇತರ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ತುಂಬಲು ಕ್ರಮ ಕೈಗೊಳ್ಳಲಾಗುವುದು. ಬೇರೆ ರಾಜ್ಯದಲ್ಲಿ ಇರುವ ಆಶಾ ಕಾರ್ಯಕರ್ತೆಯರ ಗೌರವ ಧನದ ಮಾಹಿತಿ ಪಡೆದು ರಾಜ್ಯದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಸರ್ಕಾರಿ ಸವಲತ್ತುಗಳಿಂದ ನಮಗೇನು ಲಾಭ ಎಂದು ಆಲೋಚಿಸುವ ಈ ಕಾಲಘಟ್ಟದಲ್ಲಿ ಯಾವುದೇ ಸ್ವಾರ್ಥ ಚಿಂತನೆ ಇಲ್ಲದೆ ೬ ಕೋಟಿ ವೆಚ್ಚದಲ್ಲಿ ಸಾರ್ವಜನಿಕರಿಗಾಗಿ ಆಸ್ಪತ್ರೆಯನ್ನು ಕಟ್ಟಿಸಿ ಸರ್ಕಾರಕ್ಕೆ ಬಿಟ್ಟು ಕೊಟ್ಟಿರುವ ಡಾ.ಜಿ.ಶಂಕರ ಹಾಗೂ ಅವರ ಕುಟುಂಬಕ್ಕೆ ದೇವರು ಒಳ್ಳೆದು ಮಾಡಲಿ ಎಂದು ಹಾರೈಸಿದರು.

ಶಾಸಕರಾದ ಬಿ.ರಘುಪತಿ ಭಟ್, ಬಿ.ಎಂ.ಸುಕುಮಾರ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಇದ್ದರು.