ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ನೀಡಲಾಗುತ್ತಿರುವ ಸುವರ್ಣ ಸಂಭ್ರಮ ಗೌರವ ಪ್ರಶಸ್ತಿಗೆ ಮೂಡುಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಆಯ್ಕೆಯಾಗಿದ್ದಾರೆ.
ಶಿಕ್ಷಣ, ಕಲೆ, ಸಾಂಸ್ಕೃತಿಕ, ಆರೋಗ್ಯ ಕ್ಷೇತ್ರದಲ್ಲಿ ನಾಡಿಗೆ ನೀಡಿದ ಅತ್ಯಪೂರ್ವ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆ.6ರಂದು ನಗರದ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯುವ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಸುವರ್ಣ ಸಂಭ್ರಮ ಸಮಿತಿಯ ಪ್ರಧಾನ ಸಂಚಾಲಕ ಪಿ.ಬಿ. ಹರೀಶ್ ರೈ ತಿಳಿಸಿದ್ದಾರೆ.












