ಉಡುಪಿ: ಕರಾವಳಿಯ ಜಿಲ್ಲೆಗಳಲ್ಲಿ ಕಡಲ್ಕೊರೆತ ನಿರಂತರ ಸಮಸ್ಯೆಯಾಗಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶದಂತೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲ್ಕೊರೆತ ತಡೆಗೆ ₹ 300 ಕೋಟಿ ವೆಚ್ಚದ ಯೋಜನೆ ತಯಾರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಕಾಪು ತಾಲ್ಲೂಕಿನ ಮೂಳೂರಿನ ಕಡಲ್ಗೊರೆತ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ಕಡಲ್ಕೊರೆತ ಸಂಭವಿಸಿರುವ ಪ್ರದೇಶಗಳಲ್ಲಿ ಹಾಗೂ ಈ ಹಿಂದೆ ಕಡಲ್ಕೊರೆತ ಸಂಭವಿಸಿರುವ ಪ್ರದೇಶಗಳಲ್ಲಿ ಕಡಲ್ಗೊರೆತ ತಡೆಗಾಗಿ ₹100 ಕೋಟಿ ಅಂದಾಜು ವೆಚ್ಚದ ಯೋಜನೆ ತಯಾರಿಸಿ ಸಲ್ಲಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದೇನೆ ಎಂದರು.

ಈ ಯೋಜನೆಯನ್ನು ಆದಷ್ಟು ಶೀಘ್ರ ಅಂತಿಮಗೊಳಿಸುತ್ತೇವೆ. ವೈಜ್ಞಾನಿಕ ಪರಿಣತರನ್ನು ಕರೆಸಿ ಕಡಲ್ಕೊರೆತಕ್ಕೆ ಯಾವ ಮಾದರಿಯ ತಡೆ ಕಾಮಗಾರಿ ನಡೆಸಿದರೆ ಹೆಚ್ಚು ಸೂಕ್ತ ಎಂದು ಅಧ್ಯಯನ ನಡೆಸಲು ಸೂಚಿಸುತ್ತೇವೆ. ಅನಂತರ ಕ್ರಿಯಾ ಯೋಜನೆಗೆ ಅನುಮೋದನೆ ನೀಡುತ್ತೇವೆ. ಇದು ದೀರ್ಘಾವಧಿಯ ಯೋಜನೆಯಾಗಿದ್ದು, ಅನುಷ್ಠಾನಕ್ಕೆ ಕನಿಷ್ಠ ಎರಡು ವರ್ಷಗಳಾದರೂ ಬೇಕಾಗಬಹುದು ಎಂದು ಹೇಳಿದರು.
ಕಡಲ್ಕೊರೆತ ತಡೆಗೆ ಮದ್ರಾಸ್ ಐಐಟಿಯವರು ಕೆಲವು ಶಿಫಾರಸುಗಳನ್ನು ಮಾಡಿದ್ದಾರೆ. ಅದರಂತೆ 100 ಮೀಟರ್‌ಗೆ ₹15 ಕೋಟಿ ವೆಚ್ಚವಾಗಬಹುದು. ಇಷ್ಟು ವೆಚ್ಚದ ಕಾಮಗಾರಿ ನಡೆಸುವುದಾದರೆ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಮಾಡಬೇಕಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಎಸಿ ರಶ್ಮಿ, ಕಾಪು ತಹಶೀಲ್ದಾರ್ ಪ್ರತಿಭಾ, ವಿನಯಕುಮಾರ್ ಸೊರಕೆ, ಅಶೋಕ್ ಕುಮಾರ್ ಕೊಡವೂರು, ಎಂ.ಎ.ಗಫೂರ್ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.












