ಉಡುಪಿ: ಆ.3ರಂದು ಬನ್ನಂಜೆ 90 ಉಡುಪಿ ನಮನ ಕಾರ್ಯಕ್ರಮ

ಉಡುಪಿ: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ನೆನಪಿನ “ಬನ್ನಂಜೆ 90 ಉಡುಪಿ ನಮನ ಕಾರ್ಯಕ್ರಮ” ಆ.3ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕರಾದ ರವಿರಾಜ್ ಎಚ್.ಪಿ. ತಿಳಿಸಿದರು.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬನ್ನಂಜೆ ಗೋವಿಂದ ಆಚಾರ್ಯ ಪ್ರತಿಷ್ಠಾನ ರಿಜಿಸ್ಟರ್ ಬೆಂಗಳೂರು, ಪರ್ಯಾಯ ಪುತ್ತಿಗೆ ಮಠ ಹಾಗೂ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಈ ಒಂದು ದಿನದ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಬನ್ನಂಜೆ ಅವರ ಮೂಡುಬೆಟ್ಟಿನ ಮೂಲ ಮನೆಯ ಬ್ರಹ್ಮಸ್ಥಾನ ಮತ್ತು ನಾಗ ಸ್ಥಾನದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಬೆಳಿಗ್ಗೆ 8.30 ಕ್ಕೆ ಬನ್ನಂಜೆ ಅವರು ಕಲಿತ ಆದಿಉಡುಪಿ ಶಾಲೆಯಿಂದ ಎಂಜಿಎಂ ಕಾಲೇಜಿನವರಿಗೆ ಬನ್ನಂಜೆ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಯಲಿದೆ. ನಾಡೋಜ ಪ್ರೊ ಕೆ. ಪಿ. ರಾವ್ ಚಾಲನೆ ನೀಡಲಿದ್ದಾರೆ ಎಂದರು.

ಬೆಳಿಗ್ಗೆ 9.20ಕ್ಕೆ ಬನ್ನಂಜೆಯವರ ಕೃತಿ ಆಧಾರಿತ ಯಕ್ಷಗಾನ ಪ್ರದರ್ಶನಗೊಳ್ಳಿದೆ. ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ವೇದವ್ಯಾಸಾಚಾರ್ಯ ಶ್ರೀಶಾನಂದ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಛಾಯಾಚಿತ್ರ ಹಾಗೂ ಬನ್ನಂಜೆಯವರು ಬಳಸುತ್ತಿದ್ದ ವಸ್ತು ಪ್ರದರ್ಶನವನ್ನು ತರಂಗದ ವ್ಯವಸ್ಥಾಪಕ ಸಂಪಾದಕರಾದ ಸಂಧ್ಯಾ ಪೈ ಉದ್ಘಾಟಿಸಲಿದ್ದಾರೆ‌. ಹಿರಿಯ ಸಾಹಿತಿ ವೈದೇಹಿ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿದ್ವಾಂಸ ವಿದ್ಯಾಭೂಷಣ ಅಧ್ಯಕ್ಷತೆ ವಹಿಸಲಿದ್ದಾರೆ.ಸಭಾಕಾರ್ಯ ಕ್ರಮದ ಬಳಿಕ ಸಂಜೆ 5.30ಕ್ಕೆ ವಿದ್ಯಾಭೂಷಣರಿಂದ ಆಚಾರ್ಯರ ಹಾಡುಗಳ ಹಾಡು, ನಾದ ಲಹರಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಬನ್ನಂಜೆ 90 ಉಡುಪಿ ನಮನದ ಶುಭಯಾತ್ರೆಯು ಆಗಸ್ಟ್ 2ರಂದು ಸಂಜೆ 4.30ಕ್ಕೆ ರಾಜಾಂಗಣದಲ್ಲಿ ಸುಗುಣೇಂದ್ರ ತೀರ್ಥರ ಆಶೀರ್ವಾದದೊಂದಿಗೆ ಆರಂಭ ಆಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಯೋಜನಾ ಸಮಿತಿಯ ಅಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ​ಸಮಿತಿಯ ಉಪಾಧ್ಯಕ್ಷರಾದ ​ರಂಗ ಪೈ, ಕೋಶಾಧಿಕಾರಿ ಪ್ರೊ. ಸದಾಶಿವ ರಾವ್, ಸಂಚಾಲಕ ಜನಾರ್ದನ ಕೊಡವೂರು ಉಪಸ್ಥಿತರಿದ್ದರು.