ಬ್ರಹ್ಮಾವರ: ಜಾತಿನಿಂದನೆ ಆರೋಪ; ಚೇರ್ಕಾಡಿ ಗ್ರಾಮ ಪಂಚಾಯತ್ ಪಿಡಿಒ ವಿರುದ್ಧ ಪ್ರಕರಣ ದಾಖಲು.

ಬ್ರಹ್ಮಾವರ: ಅರ್ಜಿಯ ಬಗ್ಗೆ ವಿಚಾರಿಸಲು ಹೋದ ದಲಿತ ಮಹಿಳೆಗೆ ಜಾತಿ ನಿಂದನೆಗೈದ ಆರೋಪದಲ್ಲಿ ಚೇರ್ಕಾಡಿ ಗ್ರಾಪಂ ಪಿಡಿಓ ಸುಭಾಸ್ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಾರು 2 ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯ ಪರಿಣಾಮ ಮಳೆಗಾಲ ದಲ್ಲಿ ಮೇಲ್ಭಾಗದ ಚರಂಡಿ ಹಾಗೂ ರಸ್ತೆ ನೀರು ಚೇರ್ಕಾಡಿಯ ವನಿತಾ ಎಂಬವರ ಹೈನುಗಾರಿಕ ಘಟಕಕ್ಕೆ ನುಗ್ಗಿ ಅಪಾರ ನಷ್ಟ ಉಂಟಾಗಿತ್ತು. ಈ ಬಗ್ಗೆ ವನಿತಾ ಚೇರ್ಕಾಡಿ ಗ್ರಾಪಂ ಪಿಡಿಓ ಸುಭಾಸ್ ಅವರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪಿಡಿಓ ಈ ಅರ್ಜಿಗೆ ಸ್ಪಂದಿಸದೇ ಇದ್ದು, ಈ ಬಾರಿಯ ಮಳೆಗಾಲದಲ್ಲಿ ಕೂಡ ನೀರು ಹೈನುಗಾರಿಕ ಘಟಕಕ್ಕೆ ನುಗ್ಗಿ ವನಿತಾ ಅವರಿಗೆ ನಷ್ಟ ಉಂಟಾಗಿತ್ತೆಂದು ದೂರಲಾಗಿದೆ.

ಜು.25ರಂದು ವನಿತಾ, ಚೇರ್ಕಾಡಿ ಗ್ರಾಪಂ ಕಚೇರಿಗೆ ಹೋಗಿ ಅರ್ಜಿಯ ಬಗ್ಗೆ ವಿಚಾರಿಸಿದಾಗ ಸಿಟ್ಟಿಗೆದ್ದ ಪಿಡಿಓ ವನಿತಾ ಅವರಿಗೆ ಬೆದರಿಸಿ, ಅವಾಚ್ಯ ಶಬ್ದದಿಂದ ಜಾತಿ ಬಗ್ಗೆ ನಿಂದಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.