ಬಾಹ್ಯಾಕಾಶ ಕ್ಷೇತ್ರದಲ್ಲಿ ಶುರುವಾಗಲಿದೆ ನವ್ಯೋದ್ಯಮ: ಪ್ರಧಾನಿ ಮೋದಿ

ನವದೆಹಲಿ: ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಿಂದ ಹಿಂತಿರುಗಿ ಬಂದಿರುವುದನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶದಾದ್ಯಂತ ಮಕ್ಕಳಲ್ಲಿ ಬಾಹ್ಯಾಕಾಶ ಕುರಿತಂತೆ ಕುತೂಹಲ ಹೆಚ್ಚಿಸಿದೆ. ಬಾಹ್ಯಾಕಾಶ ಕ್ಷೇತ್ರವೊಂದರಲ್ಲೇ 200ಕ್ಕೂ ಅಧಿಕ ನವೋದ್ಯಮಗಳು ಆರಂಭಗೊಳ್ಳುತ್ತಿವೆ’ ಎಂದು ತಿಳಿಸಿದರು.

124ನೇ ‘ಮನದ ಮಾತು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿಕಸಿತ ಭಾರತವು ಸ್ವಾವಲಂಬನೆಯ ಮೂಲಕ ಹಾದು ಹೋಗುತ್ತದೆ. ಆತ್ಮನಿರ್ಭರ ಭಾರತಕ್ಕೆ ‘ವೋಕಲ್‌ ಫಾರ್ ಲೋಕಲ್‌’ (ದೇಸಿ ಅಭಿವೃದ್ಧಿಗೆ ಉತ್ತೇಜನ) ಅತ್ಯಂತ ಬಲವಾದ ಅಡಿಪಾಯವಾಗಿದೆ’ ಎಂದು ತಿಳಿಸಿದರು.

‘ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಿಂದ ಸುರಕ್ಷಿತವಾಗಿ ಭೂಮಿಗೆ ಬಂದಿಳಿದಿರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು, ಜನರು ಸಂತಸ ವ್ಯಕ್ತಪಡಿಸಿದರು. ಪ್ರತಿ ಹೃದಯದಲ್ಲಿಯೂ ಸಂತಸದ ಅಲೆ ಹರಿಯಿತು. ಇಡೀ ದೇಶವೇ ಹೆಮ್ಮೆಯಿಂದ ಕೊಂಡಾಡಿತು’ ಎಂದು ಮೋದಿ ಹೇಳಿದರು.

ಐದು ವರ್ಷಗಳ ಹಿಂದೆ 50 ನವೋದ್ಯಮಗಳು ದೇಶದಲ್ಲಿ ಇದ್ದವು. ಈಗ ಬಾಹ್ಯಾಕಾಶ ಕ್ಷೇತ್ರವೊಂದರಲ್ಲಿಯೇ 200ಕ್ಕೂ ಅಧಿಕ ನವೋದ್ಯಮಗಳು ಆರಂಭಗೊಂಡಿವೆ. ಇದೇ ಆಗಸ್ಟ್‌ 23ರಂದು ‘ರಾಷ್ಟ್ರೀಯ ಬಾಹ್ಯಾಕಾಶ ದಿನ’ ನಡೆಯಲಿದ್ದು, ಕಾರ್ಯಕ್ರಮದ ಸ್ವರೂಪದ ಕುರಿತು ಸಲಹೆಗಳನ್ನು ನೀಡಬಹುದು’ ಎಂದು ಕರೆ ನೀಡಿದರು.

‘2023ರಲ್ಲಿ ಚಂದ್ರಯಾನ–3 ಯಶಸ್ವಿಯಾದ ಸಂದರ್ಭದಲ್ಲಿ ಇಡೀ ದೇಶದಲ್ಲಿ ಹೊಸ ವಾತಾವರಣ ನಿರ್ಮಾಣವಾಗಿರುವುದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಮಕ್ಕಳಲ್ಲಿಯೂ ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರದ ಕುರಿತಂತೆ ಆಸಕ್ತಿ ಸೃಷ್ಟಿಯಾಗಿದೆ. ಸಣ್ಣ ಮಕ್ಕಳು ಕೂಡ ಚಂದ್ರನಲ್ಲಿ ಇಳಿಯುವುದಾಗಿ, ಬಾಹ್ಯಾಕಾಶ ವಿಜ್ಞಾನಿಯಾಗುವುದಾಗಿ ಹೇಳುತ್ತಿದ್ದಾರೆ’ ಎಂದು ನೆನಪಿಸಿಕೊಂಡರು.

ಮಕ್ಕಳಲ್ಲಿ ಹೊಸತನ ಉತ್ತೇಜಿಸುವ ಅಭಿಯಾನದ ಅಂಗವಾಗಿ ‘ಇನ್ಸ್ಫೈರ್‌–ಮಾನಕ್‌’ ಆರಂಭಿಸಲಾಗಿದ್ದು, ಪ್ರತಿ ಶಾಲೆಯಿಂದಲೂ ಐದು ಮಂದಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಇದುವರೆಗೂ ಲಕ್ಷಾಂತರ ಮಕ್ಕಳು ಅಭಿಯಾನದಡಿಯಲ್ಲಿ ಸೇರ್ಪಡೆಯಾಗಿದ್ದು, ಚಂದ್ರಯಾನ–3 ಯಶಸ್ವಿ ಬಳಿಕ ಈ ಸಂಖ್ಯೆಯೂ ದ್ವಿಗುಣಗೊಂಡಿದೆ’ ಎಂದು ಮೋದಿ ಮಾಹಿತಿ ನೀಡಿದರು.