ಕುಂದಾಪುರ: ಹಳ್ಳಿಗಾಡಿನ ಈ ಯುವಕ ವಿಶ್ವದ ಗಮನ ಸೆಳೆದ್ರು: ವಿಶ್ವನಾಥ ಗಾಣಿಗರ ಸಾಧನೆಯ ಕತೆ ಕೇಳಿ

-ಶ್ರೀಕಾಂತ ಹೆಮ್ಮಾಡಿ 

ಬಾಲ್ಯದಲ್ಲಿ ಕಿತ್ತುತಿನ್ನುವ ಬಡತನವೇ ತಮ್ಮ ಸಾಧನೆಗೆ ಅಡ್ಡಿಯಾಯಿತು ಎಂದು ಹೇಳುವ ಮಂದಿ ಹಲವರಿದ್ದಾರೆ. ಆದರೆ ಬಡತನಕ್ಕೆ ಸೆಡ್ಡು ಹೊಡೆದು ಅದ್ಭುತ ಕ್ರೀಡಾಳುವಾಗಿ ರೂಪುಗೊಂಡು ದೇಶದ ಗಮನವನ್ನೇ ಸೆಳೆದ ಈ ಹಳ್ಳಿಗಾಡಿನ ಯುವಕನ ಯಶೋಗಾಥೆಯನ್ನು ಕೇಳಿದರೆ ನೀವೂ ಕೂಡ ಶಹಬ್ಬಾಸ್ ಎನ್ನುತ್ತೀರಿ. ಹಾಗಾದರೆ ಯಾರು ಆ ಸಾಧಕ.. ಆತ ಮಾಡಿರುವ ಸಾಧನೆಯಾದರು ಏನು ಅಂತೀರಾ ಇಲ್ಲಿದೆ ಆ ಸಾಧಕನ ಯಶೋಗಾಥೆ.

ಹಳ್ಳಿ ಹುಡುಗನ ಯಶೋಗಾಥೆ:

ಇತ್ತೀಚೆಗಷ್ಟೇ ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಅಥ್ಲೆಟಿಕ್ಸ್‌ನ ಪವರ್‌ಲಿಫ್ಟಿಂಗ್‌ನಲ್ಲಿ ಎರಡು ಚಿನ್ನ ಹಾಗೂ ಎರಡು ಬೆಳ್ಳಿಯ ಪದಕ ಗೆಲ್ಲುವ ಮೂಲಕ ವಿಶ್ವದ ಗಮನಸೆಳೆದ ಗ್ರಾಮೀಣ ಭಾಗದ ಕ್ರೀಡಾಪಟು ವಿಶ್ವನಾಥ ಭಾಸ್ಕರ್ ಗಾಣಿಗ ಇದೀಗ ಸುದ್ದಿಯಲ್ಲಿದ್ದಾರೆ.

ಕುಂದಾಪುರ ತಾಲೂಕು ದೇವಲ್ಕುಂದದ ಬಾಳಿಕೆರೆಯ ವಿಶ್ವನಾಥ ಭಾಸ್ಕರ ಗಾಣಿಗ ಕೆನಡಾದಲ್ಲಿ ನಡೆದ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಎರಡು ಚಿನ್ನ ಎರಡು ಬೆಳ್ಳಿ ಪದಕ ಪಡೆದು ಬಾಳಿಕೆರೆ ಎಂಬ ಪುಟ್ಟ ಊರನ್ನು ವಿಶ್ವಮಟ್ಟಕ್ಕೆ ಏರಿಸಿದ್ದಾರೆ.

ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡು ಆರು ದಿನಗಳ ಕಾಲ ಕೋಮಾದಲ್ಲಿದ್ದು, ಚಿಕಿತ್ಸೆ ಬಳಿಕ ಚೇತರಿಕೆಗೊಂಡ ವಿಶ್ವನಾಥ್‌ಗೆ ಮೂರು ಕೆಜಿ ಭಾರವನ್ನೂ ಎತ್ತಬಾರದು ಎಂದು ವೈದ್ಯರು ಸಲಹೆ ನೀಡಿದ್ದರು. ಆದರೆ ಅದ್ಯಾವುದನ್ನು ಲೆಕ್ಕಿಸದ ವಿಶ್ವನಾಥ ಎತ್ತಿದ ಒಟ್ಟು ಭಾರ ಬರೋಬ್ಬರಿ ೩೨೭ ಕೇಜಿ! ದೇವಲ್ಕುಂದ ಗ್ರಾಮ ಬಾಳಿಕೆರೆ ನಿವಾಸಿ ಭಾಸ್ಕರ ಗಾಣಿಗ ಹಾಗೂ ಪದ್ಮಾವತಿ ದಂಪತಿಗಳ ಮೂವರು ಮಕ್ಕಳಲ್ಲಿ ವಿಶ್ವನಾಥ ಕಿರಿಯ ಪುತ್ರ. ಇಬ್ಬರು ಸಹೋದರಿಯರಾದ ಮಂಜುಳಾ, ನೇತ್ರಾವತಿ ವಿವಾಹಿತರು. ಶಾಲಾ ದಿನಗಳಲ್ಲಿ ಸಾಕಷ್ಟು ಬಡತನ ಕಾಡಿತ್ತಾದರೂ ತಮ್ಮ ಅವಿರತವಾದ ಶ್ರಮದಿಂದಾಗಿ ಇಂದು ಇಡೀ ವಿಶ್ವವೇ ಗುರುತಿಸುವ ಮಟ್ಟಿಗೆ ವಿಶ್ವನಾಥ ಬೆಳೆದಿದ್ದಾರೆ.

ದೇಶದ ಕೀರ್ತಿ ಎತ್ತರಕ್ಕೆ ಏರಿಸಿದ್ರು:

ಈ ಹಿಂದೆಯೂ ಕಾಮನ್‌ವೆಲ್ತ್ ಪವರ್ ಲಿಫ್ಟಿಂಗ್‌ನಲ್ಲಿ ವಿಶ್ವನಾಥ ಪಾಲ್ಗೊಳ್ಳಲು ಭಾರತೀಯ ಪವರ್ ಲಿಫ್ಟಿಂಗ್ ಫೆಡರೇಶನ್‌ಗೆ ೧.೮೦ ಲಕ್ಷ ಭರಿಸಲೇಬೇಕಿತ್ತು. ಎಲ್ಲಾ ಖರ್ಚುಗಳು ಒಳಗೊಂಡಂತೆ ಒಟ್ಟು ಸರಿಸುಮಾರು ಎರಡುವರೆ ಲಕ್ಷ ಅವಶ್ಯಕತೆ ಇತ್ತು. ಆದರೆ ಇಷ್ಟೊಂದು ಮೊತ್ತದ ಹಣ ಹೊಂದಿಸಲಾಗದ ಕಾರಣ ಆರಂಭದಲ್ಲಿ ಫೆಡರೇಶನ್ ಪ್ರಕಟಿಸಿದ ೨೩ ವೇಟ್ ಲಿಫ್ಟರ್‌ಗಳ ಪಟ್ಟಿಯಲ್ಲಿ ವಿಶ್ವನಾಥ ಅವರು ಹೊರಗುಳಿದಿದ್ದರು.

ಸಿಕ್ಕ ಅವಕಾಶ ಹಣದಿಂದಾಗಿ ತಪ್ಪಿ ಹೋಗಬಾರದು ಎಂಬ ಉದ್ದೇಶದಿಂದ ವಿಶ್ವನಾಥ ಬ್ಯಾಂಕ್‌ನಲ್ಲಿ ಸಾಲಕ್ಕೆ ಅರ್ಜಿ ಹಾಕಿದ್ದರು. ಸಾಲವೂ ಸಿಕ್ಕಿತು ಅದೇ ಹಣದಿಂದ ವಿಶ್ವನಾಥ್ ಕಾಮನ್ ವೆಲ್ತ್ ಗೇಮ್‌ನಲ್ಲಿ ಪಾಲ್ಗೊಂಡು ಚಿನ್ನ ಗೆಲ್ಲುವ ಮೂಲಕ ದೇಶದ ಕೀರ್ತಿ ಎತ್ತರಕ್ಕೆ ಏರಿಸಿದರು. ೨೦೧೨ ರಿಂದ ಪದಕಗಳ ಭೇಟಿಯಾಡಲು ಹೊರಟ ವಿಶ್ವ ಇಂದಿನವರೆಗೂ ದಣಿವರಿಯದೆ ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಜೊತೆಗೆ ದೇಶದ ಬಲಾಡ್ಯ ಪುರುಷನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಟ್ಟು ೧೦ ಪದಕ ಗಳಿಸಿದ್ದು ಅದರಲ್ಲಿ ೫ ಚಿನ್ನ ಒಳಗೊಂಡಂತೆ ರಾಷ್ಟ್ರೀಯ ಮಟ್ಟದಲ್ಲಿ ೧೯ ಪದಕ ಗಳಿಸಿದ್ದಾರೆ.

ಬಡತನದ ನಡುವೆ ಅರಳಿದ ಹೂವು :

ಬಾಲ್ಯದಲ್ಲಿ ಮನೆಯಲ್ಲಿ ತೀವ್ರ ಬಡತನ ತಾಂಡವಾಡುತ್ತಿದ್ದು, ೬ನೇ ತರಗತಿಯಿಂದ ೯ನೇ ತರಗತಿ ತನಕವೂ ಬೇಸಿಗೆ ರಜೆಯಲ್ಲಿ ಬೇರೆಯವರ ಗೇರು ತೋಟದ ಗೇರು ಬೀಜ ಸಂಗ್ರಹಿಸುವ ಕೆಲಸಕ್ಕೆ ಹೋಗಿ ಪ್ರತೀ ದಿನ ೧೦ ರೂ. ದುಡಿಯುತ್ತಿದ್ದರು. ೧೦ನೇ ತರಗತಿ ವಿದ್ಯಾಭ್ಯಾಸಕ್ಕಾಗಿ ಕುಂದಾಪುರ ಹೋಟೆಲ್ ಒಂದರಲ್ಲಿ ವಿಶ್ವನಾಥ್ ಕೆಲಸವನ್ನೂ ಮಾಡಿದ್ದರು.

ಉತ್ತಮ ಅಂಕದೊಂದಿಗೆ ತೇರ್ಗಡೆಯಾದ ಅವರಿಗೆ ಪಿಯುಸಿ ವಿದ್ಯಾಭ್ಯಾಸ ಮಾಡುವುದು ಕಷ್ಟದಾಯಕವಾಗಿತ್ತು. ವಿದ್ಯಾಭ್ಯಾಸದ ಜೊತೆಗೆ ತಂದೆಯ ಜವಾಬ್ದಾರಿಗಳಿಗೆ ಹೆಗಲು ಕೊಡಬೇಕು ಎಂದು ನಿರ್ಧರಿಸಿದ ವಿಶ್ವನಾಥ್‌ಗೆ ಅಂದು ಬಸ್ರೂರಿನ ವ್ಯಕ್ತಿಯೋರ್ವರು ನೆರವಾಗಿದ್ದರು. ರಜಾ ದಿನಗಳಲ್ಲಿ ಅವರ ಜೊತೆ ಮರ ಕಡಿಯುವ ಕೆಲಸಕ್ಕೆ ಹೋಗುತ್ತಿದ್ದ ವಿಶ್ವನಾಥ್ ಕಡಿದ ಮರದ ದೊಡ್ಡ ದೊಡ್ಡ ದಿಮ್ಮಿಗಳನ್ನು ಲಾರಿಗೆ ಲೋಡ್ ಮಾಡುವ ಕೆಲಸ ಮಾಡುತ್ತಿದ್ದರು.

ಇದೇ ಕೆಲಸ ಇಂದು ಪವರ್ ಲಿಫ್ಟಿಂಗ್ ಯಶಸ್ಸಿಗೆ ಸಹಕಾರಿಯಾಗಿದೆ. ೨೦೦೯ನೇ ಇಸವಿಯಲ್ಲಿ ಅಂಕದಕಟ್ಟೆಯ ಪ್ರಶಾಂತ ಶೇರುಗಾರ್ ಮಾರ್ಗದರ್ಶನದಲ್ಲಿ ಪವರ್ ಲಿಫ್ಟಿಂಗ್ ತರಬೇತಿ ಆರಂಭಿಸಿದ ವಿಶ್ವನಾಥ್ ಪದವಿಯ ಬಳಿಕ ಉನ್ನತ ವ್ಯಾಸಂಗಕ್ಕೆ ಬೆಂಗಳೂರಿಗೆ ತೆರಳಿ ಅಲ್ಲಿಯೂ ಲ್ಯಾಬ್ ಕೆಲಸದ ಜೊತೆಗೆ ಉನ್ನತ ವ್ಯಾಸಂಗ ಅಂತಿಮಗೊಳಿಸಿ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಕಂಪೆನಿಯಲ್ಲಿ ಉದ್ಯೋಗ ಪಡೆದುಕೊಂಡರು.

ಸರ್ಕಾರ ನೀಡಬೇಕಿದೆ ಪ್ರೋತ್ಸಾಹ

ಪದಕ ಗೆಲ್ಲಬೇಕು ಎನ್ನುವ ನಿರೀಕ್ಷೆಗಿಂತಲೂ ದಾಖಲೆ ಮಾಡಬೇಕು ಎನ್ನುವ ಮೂಲಕ ಸ್ಪರ್ಧೆಗೆ ಇಳಿದರೆ, ದಾಖಲೆ ಬರೆಯುವ ಜೊತೆ ಪದಕ ಕೂಡಾ ಸಿಗುತ್ತದೆ. ಕಷ್ಟ ಎಂದು ಮಾಡುವ ಬದಲು ಇಷ್ಟಪಟ್ಟು ಮಾಡಿದರೆ ಸಾಧನೆಗೆ ಏನು ಅಡ್ಡಿಯಾಗುವುದಿಲ್ಲ ಎನ್ನುತ್ತಾರೆ ವಿಶ್ವನಾಥ ಗಾಣಿಗ.

ಒಟ್ಟಿನಲ್ಲಿ ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವವೇ ಗುರುತಿಸುವ ಸಾಧನೆ ಮಾಡಿದರೂ ಇದುವರೆಗೂ ವಿಶ್ವನಾಥ ಗಾಣಿಗರನ್ನು ಗುರುತಿಸಿ ಅವರ ಜೀವನಭದ್ರತೆಗೊಂದು ಸರ್ಕಾರಿ ಉದ್ಯೋಗ ಕೊಡಿಸುವ ಕೆಲಸಕ್ಕೂ ಸಂಬಂಧಪಟ್ಟ ಸರ್ಕಾರ ಮುಂದಾಗಿಲ್ಲ್ಲ. ಒಲಂಪಿಕ್ ಕ್ರೀಡಾ ಕೂಟದಲ್ಲಿ ಪದಕ ಗೆದ್ದವರಿಗೆ ಸರ್ಕಾರ ನೀಡುವ ಪ್ರೋತ್ಸಾಹ ಧನ ನಾನ್ ಒಲಂಪಿಕ್ ಸಾಧಕರಿಗೂ ನೀಡಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಆಳುವ ಸರ್ಕಾರಗಳು ಗಮನ ಹರಿಸಬೇಕು ಎನ್ನೋದೆ ನಮ್ಮ ಆಶಯ.