ಚೆನ್ನೈ: ತಮಿಳುನಾಡಿನಲ್ಲಿ 4,800 ಕೋಟಿ ಮೊತ್ತದ ವಿವಿಧ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ನೆರವೇರಿತು.
ಅಭಿವೃದ್ಧಿ ಯೋಜನೆಗಳಿಗೆ ಚಾಲನೆ:
ಮಾಲ್ಡೀವ್ಸ್ನಲ್ಲಿ 2 ದಿನಗಳ ಪ್ರವಾಸದ ಬಳಿಕ ಭಾರತಕ್ಕೆ ಬಂದಿಳಿದ ಮೋದಿ ಶನಿವಾರ ತಮಿಳುನಾಡಿನ ತೂತುಕುಡಿಯಲ್ಲಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಉದ್ಘಾಟನೆಯಾದ ಪ್ರಮುಖ ಯೋಜನೆಗಳಲ್ಲಿ ವಿಮಾನ ನಿಲ್ದಾಣದಲ್ಲಿ 17,000 ಚದರ ಮೀಟರ್ ವಿಸ್ತೀರ್ಣದ ಅತ್ಯಾಧುನಿಕ ಟರ್ಮಿನಲ್ ಕಟ್ಟಡವೂ ಸೇರಿದೆ. ಅಲ್ಲದೇ ಹೆದ್ದಾರಿ, ರೈಲ್ವೆ, ಬಂದರು, ವಿದ್ಯುತ್ ಯೋಜನೆಗಳೂ ಇದರಲ್ಲಿ ಸೇರಿವೆ. ಸೇಥಿಯಾಥೋಪೆ-ಚೋಳಾಪುರ ನಡುವಿನ ಚತುಷ್ಫಥ ಹೆದ್ದಾರಿ ಸೇರಿದಂತೆ ಹಲವು ಸಂಪರ್ಕ ಯೋಜನೆಗಳನ್ನು ಪ್ರಧಾನಿ ಮೋದಿ ಇಂದು ಲೋಕಾರ್ಪಣೆಗೊಳಿಸಿದ್ದಾರೆ.
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ನಾಲ್ಕು ದಿನಗಳ ವಿದೇಶಿ ಪ್ರವಾಸದ ನಂತರ, ಭಗವಾನ್ ರಾಮೇಶ್ವರಂನ ಈ ಪವಿತ್ರ ಭೂಮಿಗೆ ನೇರವಾಗಿ ಬರುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಈ ಅಭಿವೃದ್ಧಿ ಯೋಜನೆಗಳು ಪ್ರಪಂಚ ಬೆಳೆಯುತ್ತಿರುವುದರ ನಂಬಿಕೆ, ಜೊತೆಗೆ ಭಾರತದ ಹೊಸ ಆತ್ಮ ವಿಶ್ವಾಸದ ಸಂಕೇತವಾಗಿದೆ. ಈ ಆತ್ಮವಿಶ್ವಾಸದೊಂದಿಗೆ, ನಾವು ವಿಕಸಿತ ಭಾರತ ಮತ್ತು ವಿಕಸಿತ ತಮಿಳುನಾಡನ್ನು ನಿರ್ಮಿಸುತ್ತೇವೆ ಎಂದು ಆತ್ಮವಿಶ್ವಾಸ ತುಂಬಿದರು.
ರಾಜ್ಯದ ಬೆಳವಣಿಗೆಗೆ ಮೂಲಸೌಕರ್ಯ ಮತ್ತು ಶಕ್ತಿ ಅಗತ್ಯವಾಗಿ ಬೇಕಾಗುತ್ತದೆ. ಮೂಲಸೌಕರ್ಯ ಮತ್ತು ಇಂಧನ ರಾಜ್ಯದ ಅಭಿವೃದ್ಧಿಯ ಬೆನ್ನೆಲುಬಾಗಿದೆ. ಕಳೆದ 11 ವರ್ಷಗಳಲ್ಲಿ ಇವುಗಳ ಮೇಲೆ ನಾವು ಗಮನ ಹರಿಸಿರುವುದು ತಮಿಳುನಾಡಿನ ಬೆಳವಣಿಗೆಯ ಬಗ್ಗೆ ನಮ್ಮ ಬದ್ಧತೆ ತೋರಿಸುತ್ತದೆ ಎಂದು ಕೇಂದ್ರ ಸರ್ಕಾರದ ಕ್ರಮಗಳ ಬಗ್ಗೆ ತಿಳಿಸಿದರು.












