ಮಣಿಪಾಲ: ಸ್ಪರ್ಧಾತ್ಮಕ ಯುಗದಲ್ಲಿ ಶೈಕ್ಷಣಿಕ ಅರ್ಹತೆಗಳಿಗಿಂತಲೂ ಜಾಸ್ತಿ ಕೌಶಲ್ಯಗಳು ಅಗತ್ಯವಿದೆ. ಕೌಶಲ್ಯಾಧಾರಿತ ಶಿಕ್ಷಣ ಕುರಿತು ಅಮೇರಿಕಾ, ಜಪಾನ್ ನಂತಹ ದೊಡ್ಡ ದೇಶಗಳು ಈಗಾಗಲೇ ಯೋಚಿಸಿ ಯಶಸ್ವಿಯಾಗಿದೆ. ಭಾರತದಲ್ಲಿಯೂ ಇದಕ್ಕೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಮಣಿಪಾಲ ಕೌಶಲ್ಯ ಅಭಿವೃದ್ದಿ ಕೇಂದ್ರ (MSDC) ಹೆಜ್ಜೆ ಇಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಮಾಹೆ ವಿಶ್ವಿದ್ಯಾನಿಲಯದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ.) ಎಂ.ಡಿ. ವೆಂಕಟೇಶ್ ಹೇಳಿದ್ದಾರೆ.
ಅವರು ಇಲ್ಲಿನ ಮಣಿಪಾಲ ಕೌಶಲ್ಯ ಅಭಿವೃದ್ದಿ ಕೇಂದ್ರ MSDCಯ ವಾರ್ಷಿಕೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. MSDC ಯಲ್ಲಿ ಕಡಿಮೆ ಅವಧಿಯ ಕೌಶಲ್ಯಾಧಾರಿತ ಕೋರ್ಸ್ ಗಳಿವೆ. ಇದು ಕಾಲೇಜನ್ನು ಅರ್ಧದಲ್ಲಿ ನಿಲ್ಲಿಸಿದ ವಿದ್ಯಾರ್ಥಿಗಳಿಗೂ ಅನುಕೂಲವಾಗಿದೆ. ಕೌಶಲ್ಯವೇ ವೃತ್ತಿಪರ ಜಗತ್ತಿನಲ್ಲಿ ಹೆಜ್ಜೆ ಇಡಲು ಆಧಾರವಾಗುತ್ತದೆ ಎಂದವರು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಹೆ ವಿಶ್ವಿದ್ಯಾನಿಲಯದ ಸಹ ಉಪಕುಲಪತಿ ಡಾ.ನಾರಾಯಣ ಸಭಾಹಿತ್ ಅವರು ಮಾತನಾಡಿ, ಕೌಶಲ್ಯಾಧಾರಿತ ಶಿಕ್ಷಣ ಸಾಮಾಜಿಕ ಬದಲಾಣೆಗೆ ಕಾರಣವಾಗುತ್ತದೆ. ಕೌಶಲ್ಯಗಳಿಂದ ಉದ್ಯೋಗ ಹೆಚ್ಚಳ ಕೂಡ ಸಾಧ್ಯವಿದೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೌಶಲ್ಯ ಶಿಕ್ಷಣ ನೀಡುವ ಗುರಿ MSDC ಹೊಂದಿದೆ ಎಂದರು.
ಎಂ ಎಸ್ ಡಿ ಸಿ ರಿಜಿಸ್ಟರ್ ಡಾ. ಆಂಜಯ್ಯ ದೇವಿನೆನಿ ಶುಭ ಹಾರೈಸಿದರು.
ಪ್ರಾಸ್ತಾವಿಕಾಗಿ ಮಾತನಾಡಿದ ಎಂಎಸ್ ಡಿಸಿ ಮಣಿಪಾಲ ಇದರ ಅಧ್ಯಕ್ಷರು ಬ್ರಿ.ಡಾ. ಸುರ್ಜೀತ್ ಸಿಂಗ್ ಪಬ್ಲಾ, ಸುಮಾರು 20 ಕ್ಕಿಂತಲೂ ಹೆಚ್ಚಿನ ಕೌಶಲ್ಯಾಧಾರಿತ ಶಿಕ್ಷಣವನ್ನು MSDC ಮತ್ತು ಮಣಿಪಾಲ ಡಾ. ಟಿ ಎಂಎ ಪೈ ಪಾಲಿಟೆಕ್ನಿಕ್ ಕಾಲೇಜು ನೀಡುತ್ತಿದೆ. ದೇಶದಲ್ಲಿ ಈ ಸಂಸ್ಥೆಗೆ ಒಳ್ಳೆಯ ಹೆಸರಿದೆ ಒಳ್ಳೆಯ ಕೌಶಲ್ಯ ನೀಡುವುದೇ MSDCಯ ಮಂತ್ರ ಎಂದರು.
ಓರೇನ್ ಇಂಟರ್ನ್ಯಾಷನಲ್ ಸೆಂಟರ್ ಮುಖ್ಯಸ್ಥೆ ನೀತಾ ಶೆಟ್ಟಿ ನಿರೂಪಿಸಿದರು. ಐಟಿ ಸ್ಕೂಲ್ ಹೆಡ್ ರಾಜಲಕ್ಷ್ಮಿ ವಂದಿಸಿದರು.
ಕಾರ್ಯಕ್ರಮದ ನಂತರ MSDC’ಯ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ಅನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

























