ಸೆ. 29ರಿಂದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸಂಭ್ರಮದ ದಸರಾ ಮಹೋತ್ಸವ

ಮಂಗಳೂರು: ಮಂಗಳೂರಿನ ಕುದ್ರೋಳಿಯ ಗೋಕರ್ಣನಾಥ ಕ್ಷೇತ್ರದಲ್ಲಿ ಸೆಪ್ಟೆಂಬರ್ 29ರಿಂದ ಅಕ್ಟೋಬರ್ 9ರ ವರೆಗೆ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ ಎಂದು ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಉತ್ಸವಗಳು ನಡೆಯಲಿದ್ದು, ಸೆಪ್ಟೆಂಬರ್ 29ರ ಬೆಳಗ್ಗೆ 8.30ಕ್ಕೆ ಗುರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಳ್ಳುತ್ತದೆ ಎಂದರು.

ಅಂದು ಪೂರ್ವಾಹ್ನ 11.20ಕ್ಕೆ ನವದುರ್ಗೆಯರು ಹಾಗೂ ಶಾರದಾ ಪ್ರತಿಷ್ಠೆ ನಡೆಯಲಿದೆ. ಸೆಪ್ಟೆಂಬರ್ 30ರಂದು ದುರ್ಗಾ ಹೋಮ, ಅ.1ರಂದು ಬೆಳಗ್ಗೆ ಆರ್ಯ ದುರ್ಗಾ ಹೋಮ, ಅ. 2ರಂದು ಭಗವತೀ ದುರ್ಗಾ ಹೋಮ, ಅ.‌ 3ರಂದು ಕುಮಾರಿ ದುರ್ಗಾ ಹೋಮ, ಅ. 4ರಂದು ಅಂಬಿಕಾ ದುರ್ಗಾ ಹೋಮ, ಅ. 5ರಂದು ಮಹಿಷಮರ್ದಿನಿ ದುರ್ಗಾ ಹೋಮ, ಅ.6ರಂದು ಚಂಡಿಕಾ ಹೋಮ, ಅ. 7ರಂದು ಸರಸ್ವತಿ ದುರ್ಗಾ ಹೋಮ, ಅ. 8ರಂದು ವಾಗೀಶ್ವರಿ ದುರ್ಗಾ ಹೋಮ ನಡೆಯಲಿದೆ ಎಂದು ಮಾಹಿತಿ‌ ನೀಡಿದರು.

ಅ. 8ರಂದು ಸಂಜೆ 4 ಗಂಟೆಗೆ ದಸರಾ ಶೋಭಾಯಾತ್ರೆ ಆರಂಭವಾಗಲಿದೆ. 9ರಂದು ಬೆಳಗ್ಗೆ 4 ಗಂಟೆಗೆ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ ನಡೆದು ಶಾರದಾ ವಿಸರ್ಜನೆ, ಅವಭೃತ ಸ್ನಾನ ನಡೆಯಲಿದೆ ಎಂದರು.

ಈ ಬಾರಿಯ‌‌ ಮಂಗಳೂರು ದಸರಾ ಶೋಭಾ ಯಾತ್ರೆಯಲ್ಲಿ ಶಾರದಾ ಮಾತೆಗೆ ಪ್ರಥಮ ಸ್ಥಾನವನ್ನು ನೀಡಲಾಗುವುದು. ನಾಡಿನ‌ ಸಹಸ್ರಾರು ಮಂದಿ ಭಕ್ತರು ಈ‌ ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಹರಿಕೃಷ್ಣ ಬಂಟ್ವಾಳ, ಪದ್ಮರಾಜ್ ಆರ್ ಉಪಸ್ಥಿತರಿದ್ದರು.