ಉಡುಪಿ: ಸಂತೆಕಟ್ಟೆಯಲ್ಲಿ ಪ್ರಥಮ ಬಾರಿಗೆ ಎಂಬಂತೆ ಹಲಸು ಮತ್ತು ಹಣ್ಣು ಮೇಳವನ್ನು ಕೆಮ್ಮಣ್ಣು ಲಿಟ್ಲ್ ಫ್ಲವರ್ ಹಾಲ್‌ನಲ್ಲಿ ಜು.26 ಮತ್ತು 27ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ಮುಹಮ್ಮದ್ ಮುಖ್ತಾರ್ ಹುಸೇನ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಳದಲ್ಲಿ ಮುಖ್ಯವಾಗಿ ಆಂಧ್ರದಿಂದ ತರಿಸಲಾದ ಏಕದಶಿ, ರುದ್ರಾಕ್ಷಿ, ಕೇಸರ್, ಚಂದ್ರ ಹಲಸು ವಿಶೇಷವಾಗಿದೆ. ರಾಜ್ಯದ ವಿವಿಧ ಮೂಲೆಗಳಿಂದ ರುಚಿಯಾದ ಮಾವು ಮತ್ತು ಹಲಸಿನ ಹಾಗೂ ಇತರ ಉತ್ಪನ್ನಗಳ ಖಾದ್ಯಗಳ ನೂರಾರು ಮಳಿಗೆಗಳಿದ್ದು, ಬಟರ್‌ಫ್ರೂಟ್, ನೇರಳೆ ಸೇರಿದಂತೆ ವಿವಿಧ ಹಣ್ಣುಗಳು ಮೇಳದ ಆಕರ್ಷಣೆಯಾಗಿವೆ ಎಂದರು.
ಕಾರ್ಯಕ್ರಮವನ್ನು ಜು.26ರಂದು ಬೆಳಗ್ಗೆ 11ಗಂಟೆಗೆ ಮೇಳವನ್ನು ಕೆಮ್ಮಣ್ಮು ಚರ್ಚಿನ ಧರ್ಮಗುರು ಉದ್ಘಾಟಿಸಲಿರುವರು. ಜು.27ರಂದು ಸಂಜೆ 5ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಉದ್ಯಮಿ ಹಾಗೂ ಕೃಷಿಕರನ್ನು ಸನ್ಮಾನಿಸಲಾಗುವುದು. ಮೇಳದಲ್ಲಿ ಏಳು ವರ್ಷದೊಳಗಿನ ಮಕ್ಕಳು ಹಲಸು ತಿನ್ನುವ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟಕರಾದ ನಿಜಾಮುದ್ದೀನ್‌ಷ ಮುಹಮ್ಮದ್ ಯಾಸೀನ್, ಗಫೂರ್, ಮಾಶೂಕ್ ಉಪಸ್ಥಿತರಿದ್ದರು












