ಉಡುಪಿ: ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರು ಹಾಗೂ ಮಾರಾಟಗಾರರ ಸಂಘ ಬ್ರಹ್ಮಾವರ ಇದರ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸಮ್ಮಾನ ಬ್ರಹ್ಮಾವರ ಸಿಟಿ ಸೆಂಟರ್‌ನ ಕುಂಕುಮ ಸಭಾಂಗಣದಲ್ಲಿ ಜು. 27ರ ಬೆಳಗ್ಗೆ 10.30 ಕ್ಕೆ ನಡೆಯಲಿದೆ.
ಶಾಸಕ ಯಶ್‌ಪಾಲ್ ಎ. ಸುವರ್ಣ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷ ವಿಶ್ವನಾಥ ಕುಲಾಲ್ ಅಧ್ಯಕ್ಷತೆ ವಹಿಸುವರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಉಡುಪಿ, ದ.ಕ. ಜಿಲ್ಲೆಯ ಅಂಕಿತಾಧಿಕಾರಿ ಡಾ| ಪ್ರವೀಣ್ ಕುಮಾರ್, ಕಲ್ಕೂರ ರೆಫ್ರಿಜರೇಶನ್ ಆ್ಯಂಡ್ ಕಿಚನ್ ಇಕ್ವಿಪ್‌ಮೆಂಟ್ಸ್ ನ ಎಂಡಿ ರಂಜನ್ ಕಲ್ಕೂರ ಭಾಗವಹಿಸುವರು.
ಪೆರ್ಡೂರು ವಡ್ಜೆಯ ಅರುಣೋದಯ ಹೋಮ್ ಇಂಡಸ್ಟ್ರೀಸ್‌ನ ಅರುಣಾ ವಸಂತ ನಾಯಕ್, ಮಂಗಳೂರು ವಿ.ಜಿ. ಕಾಂಡಿಮೆಂಟ್ಸ್ ನ ಉದಯ ಕುಮಾರ್ ಅವರನ್ನು ಸಮ್ಮಾನಿಸಲಾಗುವುದು ಎಂದು ಗೌರವಾಧ್ಯಕ್ಷ ವಾಲ್ಟರ್ ಸಲ್ಡಾನ್ಹ, ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ, ಕೋಶಾಧಿಕಾರಿ ಶಶಿಕಾಂತ್ ಜಿ. ನಾಯಕ್ ತಿಳಿಸಿದ್ದಾರೆ.
ಸಮಾನ ಮನಸ್ಕ ಬೇಕರಿ ಉದ್ಯಮಿಗಳು ಒಟ್ಟಾಗಿ ವ್ಯವಹಾರ ಅಭಿವೃದ್ಧಿ ಆಹಾರೋದ್ಯಮದಲ್ಲಿ ನಿಯಮ ಬದ್ಧ ವ್ಯವಹಾರ ನಡೆಸಲು, ಸರಕಾರದ ಸೌಲಭ್ಯಗಳನ್ನು ಪಡೆಯಲು, ನಿಯಮಗಳಲ್ಲಿ ಗೊಂದಲ ಉಂಟಾದಲ್ಲಿ ಅದಕ್ಕೆ ಪರಿಹಾರ ಕಂಡುಕೊಳ್ಳಲು 2016ರಲ್ಲಿ ಜಿಲ್ಲಾಮಟ್ಟದಲ್ಲಿ ರಾಬರ್ಟ್ ಫುಟಾರ್ಡೊ ಅವರ ನಾಯಕತ್ವದಲ್ಲಿ ಸಾಸ್ತಾನದ ಐರೋಡಿಯಲ್ಲಿ ಸಂಘ ಸ್ಥಾಪನೆಗೊಂಡಿತು.
ಪ್ರಾರಂಭದಲ್ಲಿ ಅತ್ಯಲ್ಪ ಸದಸ್ಯರನ್ನು ಒಳಗೊಂಡ ಸಂಘ 2020ರ ವೇಳೆಗೆ 700 ಸದಸ್ಯರನ್ನು ಹೊಂದಿತು. ಕೊರೊನಾ ಸಂದರ್ಭ ಅಂಗಡಿ-ಮುಂಗಟ್ಟುಗಳು ಮುಚ್ಚಲ್ಪಟ್ಟು ಜನರಿಗೆ ಅವಶ್ಯ ಆಹಾರ ವಸ್ತುಗಳು ಸಿಗದೆ ಸಂಕಷ್ಟದಲ್ಲಿದ್ದಾಗ ಸರಕಾರದ ಗಮನ ಸೆಳೆದು ಅವಶ್ಯ ವಸ್ತುಗಳು ದೊರಕುವಂತೆ ಮಾಡುವಲ್ಲಿ ಸಂಘ ಯಶಸ್ವಿಯಾಗಿತ್ತು. ಸಂಘವು 2023ರಲ್ಲಿ ಬ್ರಹ್ಮಾವರ ಆಕಾಶವಾಣಿ ಬಳಿಯ ಕೃಷ್ಣಗಿರಿ ಕಾಂಪ್ಲೆಕ್ಸ್ನಲ್ಲಿ ಸಂತ ಕಚೇರಿ ತೆರೆದು ಕಾರ್ಯಾಚರಿಸುತ್ತಿದೆ.












