ಧರ್ಮಸ್ಥಳ: ಮಾಧ್ಯಮ ನಿರ್ಬಂಧ ಪ್ರಶ್ನಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

ನವದೆಹಲಿ: ಧರ್ಮಸ್ಥಳ ಪ್ರಕರಣಗಳಿಗೆ ಸಂಬಂಧಿಸಿದ ಮಾಧ್ಯಮ ವರದಿಗಳನ್ನು ನಿಷೇಧಿಸುವ ಬೆಂಗಳೂರು ನಗರ ಸೆಷನ್ಸ್ ನ್ಯಾಯಾಲಯದ ಆದೇಶದ ವಿರುದ್ಧ ಯೂಟ್ಯೂಬ್ ಚಾನೆಲ್ ‘ಥರ್ಡ್ ಐ’ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆಗೆ ನಿರಾಕರಿಸಿದೆ.

ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆಯವರ ಸಹೋದರ ಹರ್ಷೇಂದ್ರ ಕುಮಾರ್ ಡಿ. ಅವರ ಮಾನಹಾನಿ ಮಾಡಲಾಗುತ್ತಿದೆ ಎಂದು ಸೆಷನ್ಸ್ ನ್ಯಾಯಾಲಯವು ಸುದ್ದಿ ಪ್ರಸಾರ ಮಾಡದಂತೆ ಆದೇಶ ನೀಡಲಾಗಿತ್ತು.

ಸುಮಾರು 9,000 ಆನ್ ಲೈನ್ ಲಿಂಕ್ಗಳು ಹಾಗೂ ವರದಿಗಳನ್ನು ತೆಗೆದುಹಾಕಲು 390 ಮಾಧ್ಯಮ ಸಂಸ್ಥೆಗಳಿಗೆ ಸೂಚನೆ ನೀಡಲಾಗಿತ್ತು. ಈ ಮಧ್ಯಂತರ ಆದೇಶದ ವಿರುದ್ಧ ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಪೀಠವು ವಿಚಾರಣೆಗೆ ನಿರಾಕರಿಸಿತು. ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಜೋಯ್ಮಲ್ಯ ಬಾಗ್ಚಿ ಕೂಡ ಇದ್ದರು. ನೀವು ಮೊದಲು ಹೈಕೋರ್ಟ್ಗೆ ಹೋಗಬೇಕಾಗಿತ್ತು ಎಂದು ಅರ್ಜಿದಾರರಿಗೆ ಪೀಠವು ಸೂಚಿಸಿತು.

ಈ ಪ್ರಕರಣದಲ್ಲಿ ಹರ್ಷೇಂದ್ರ ಕುಮಾರ್, ತಮ್ಮ ವಿರುದ್ಧ ಯಾವುದೇ ಎಫ್ ಐಆರ್ ಇಲ್ಲದಿದ್ದರೂ ಸಾಮಾಜಿಕ ಮಾಧ್ಯಮ ಹಾಗೂ ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ತಪ್ಪು ಮಾಹಿತಿಯನ್ನು ಹರಡಲಾಗುತ್ತಿದೆ ಎಂದು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.