ಉಡುಪಿ: ರಾಜ್ಯ ಕರಾವಳಿಯ ಜಿಲ್ಲೆಗಳಿಗೆ ಭಾರೀ ಮಳೆಯ ಸಾದ್ಯತೆಯಿದ್ದು, ಜು.20, ಮತ್ತು 21ರಂದು ರೆಡ್ ಅಲರ್ಟ್ ಹಾಗೂ ನಂತರದ ಐದು ದಿನಗಳಲ್ಲಿ ಆರೆಂಜ್ ಅಲರ್ಟ್‌ನ್ನು ಹವಾಮಾನ ಇಲಾಖೆ ಘೋಷಿಸಿದೆ. ಈ ಸಂದರ್ಭದಲ್ಲಿ ಭಾರೀ ಮಳೆಯ ಸಾದ್ಯತೆಯನ್ನು ಅದು ನೀಡಿದೆ.
ಜು.20, 21 ರಂದು ಗಂಟೆಗೆ 30ರಿಂದ 40ಕಿ.ಮೀ. ವೇಗದ ಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಅದು ಎಚ್ಚರಿಸಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು ಸರಾಸರಿ 28.4ಮಿ.ಮೀ. ಮಳೆ ದಾಖಲಾಗಿದೆ. ಕಾಪುವಿನಲ್ಲಿ ಅತ್ಯಧಿಕ 56.5ಮಿ.ಮೀ. ಮಳೆಯಾದರೆ ಉಡುಪಿಯಲ್ಲಿ 37.3, ಹೆಬ್ರಿಯಲ್ಲಿ 32.7, ಕಾರ್ಕಳದಲ್ಲಿ 30.6, ಬೈಂದೂರಿ ನಲ್ಲಿ 29.1, ಬ್ರಹ್ಮಾವರದಲ್ಲಿ 26.4ಮಿಮೀ. ಮಳೆಯಾಗಿದೆ.
ಕಾಪು ತಾಲೂಕಿನ ಹೆಜಮಾಡಿ, ಬೆಳಪು ಹಾಗೂ ನಡ್ಪಾಲು ಅಲ್ಲದೇ ಕುಂದಾಪುರದ ಕೋಣಿಯಲ್ಲಿ ತಲಾ ಒಂದು ಮನೆಗಳಿಗೆ ಹಾನಿಯಾಗಿದ್ದು 1.5 ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ.












