ಮಂಗಳೂರು: ಕರ್ನಾಟಕ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘ (ಕುಪ್ಮಾ)ವು ಜು. 20ರಿಂದ ಸೆಪ್ಟೆಂಬರ್ 12ರವರೆಗೆ ಜಿಲ್ಲಾವಾರು ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳ ಸದಸ್ಯತ್ವ ಅಭಿಯಾನ ನಡೆಸಲಿದೆ. ಅಲ್ಲದೆ ರಾಜ್ಯವ್ಯಾಪಿ ಕುಪ್ಮಾ ಜಿಲ್ಲಾ ಸಮಿತಿ ಗಳನ್ನು ರಚಿಸುವ ಮೂಲಕ ಕುಪ್ಮಾ ಸಂಘಟನೆಯನ್ನು ಬಲಪಡಿಸಲಾಗುವುದು ಎಂದು ಕುಪ್ಮಾ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 3500ಕ್ಕೂ ಅಧಿಕ ಅನುದಾನ ರಹಿತ ಪಪೂ ಕಾಲೇಜುಗಳಿವೆ. ಮೂರು ವರ್ಷಗಳಿಂದ ಕುಪ್ಮಾ ನಿರಂತರವಾಗಿ ಖಾಸಗಿ ಅನುದಾನರಹಿತ ಕಾಲೇಜುಗಳ ಸಮಸ್ಯೆಯನ್ನು ಸರಕಾರದ ಗಮನಕ್ಕೆ ತರುವ ಮೂಲಕ ಹಲವು ಸಮಸ್ಯೆಗಳನ್ನು ಬಗೆಹರಿಸಿದೆ. ಕೆಲವು ಸುಧಾರಣೆಗಳನ್ನು ತರಲು ಶ್ರಮಿಸಿದೆ. ಇನ್ನೂ ಕೆಲವು ಜ್ವಲಂತ ಸಮಸ್ಯೆಗಳಿದ್ದು, ಅದನ್ನು ಬಗೆಹರಿಸಲು ರಾಜ್ಯವ್ಯಾಪಿ ಕುಪ್ಮಾ ಸಂಘಟನೆಯನ್ನು ವಿಸ್ತರಿಸಲಾಗುವುದು ಎಂದರು.ಕುಪ್ಮಾ ಕಾರ್ಯದರ್ಶಿ ಪ್ರೊ.ನರೇಂದ್ರ ಎಲ್. ನಾಯಕ್ ಮಾತನಾಡಿ ಸೆ.12 ಮತ್ತು 13ರಂದು ಕುಪ್ಮಾದ ರಾಜ್ಯಮಟ್ಟದ ಸಮಾವೇಶವನ್ನು ದಾವಣಗೆರೆಯಲ್ಲಿ ಆಯೋಜಿಸಲಾಗುವುದು. ಸಮಾವೇಶದಲ್ಲಿ ಸದಸ್ಯತ್ವ ವನ್ನು ಪಡೆದಿರುವ ಎಲ್ಲಾ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ರಾಜ್ಯದ ಪದವಿ ಪೂರ್ವ ಕಾಲೇಜುಗಳ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಈ ಸಮಾವೇಶದ ಉದ್ದೇಶವಾಗಿದೆ ಎಂದರು.
ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ರಾಜ್ಯ ಕಾರ್ಯ ಕಾರಿಣಿ ಸಮಿತಿಯ ಗೌರವ ಅಧ್ಯಕ್ಷರಾಗಿ ಕೆ. ರಾಧಾಕೃಷ್ಣ ಶೆಣೈ, ಪ್ರೊ. ಎಂ.ಬಿ.ಪುರಾಣಿಕ್, ಡಾ.ಕೆ.ಸಿ. ನಾಯ್ಕ್, ಅಧ್ಯಕ್ಷರಾಗಿ ಡಾ.ಎಂ ಮೋಹನ್ ಆಳ್ವ, ಕಾರ್ಯದರ್ಶಿಯಾಗಿ ಪ್ರೊ.ನರೇಂದ್ರ ಎಲ್. ನಾಯಕ್ ಸೇರಿದಂತೆ 16 ಮಂದಿ ಸದಸ್ಯರನ್ನು ಒಳಗಳನ್ನು ಸಂಘವನ್ನು ರಾಜ್ಯಮಟ್ಟಕ್ಕೆ ವಿಸ್ತರಿಸುವ ಬಗ್ಗೆ ಚರ್ಚಿಸಿ ಕೈಗೊಂಡ ಕ್ರಮವಾಗಿ ಈಗಾಗಲೇ ಜಿಲ್ಲಾವಾರು ಸಂಯೋಜಕರನ್ನು ನೇಮಿಸಲಾಗಿದೆ.ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಮೈಸೂರು ಜಿಲ್ಲೆಗಳಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಸದಸ್ಯರುಗಳನ್ನು ಒಳಗೊಂಡ ಜಿಲ್ಲಾ ಸಮಿತಿ ಇದೆ ಎಂದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯಲಾಗಿದೆ. ಪ್ರತಿವರ್ಷ ನೋಂದಣಿ ನವೀಕರಣ, ದ್ವಿತೀಯ ಪಿಯುಸಿಯಲ್ಲಿ ಮೂರು ಪರೀಕ್ಷೆಯ ಅಗತ್ಯ ಇದೆಯೇ ಎಂಬುದರ ಬಗ್ಗೆ ಚರ್ಚೆ ನಡೆಸಿ ಸರಕಾರದ ಗಮನ ಸೆಳೆಯಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುಪ್ಮಾ ಗೌರವಾಧ್ಯಕ್ಷರಾದ ಡಾ.ಕೆ.ಸಿ.ನಾಯ್ಕ್, ರಾಧಾಕೃಷ್ಣ ಶೆಣೈ, ಪದಾಧಿಕಾರಿ ಗಳಾದ ಸುಧಾಕರ ಶೆಟ್ಟಿ, ಯುವರಾಜ ಜೈನ್, ಮಂಜುನಾಥ ರೇವಣ್ಕರ್ ಉಪಸ್ಥಿತರಿದ್ದರು.ಕಳೆದ ಮೂರು ವರ್ಷಗಳಲ್ಲಿ ಕುಪ್ಮಾ ಸಮಿತಿಯು ಕಾರ್ಯಕ್ರಮಗಳನ್ನು ಕುಪ್ಮಾ ಕಿರು ಹೊತ್ತಗೆ ಮೂಲಕ ದಾಖಲಿಸಿದೆ. ಅದನ್ನು ಈ ವೇಳೆ ಡಾ.ಎಂ. ಮೋಹನ ಆಳ್ವ ಬಿಡುಗಡೆಗೊಳಿಸಿದರು. ಈ ಕಿರು ಹೊತ್ತಗೆ ಯಲ್ಲಿ ಕುಪ್ಮಾ ಕಾನೂನಾತ್ಮಕವಾಗಿ ಹೇಗೆ ಕಾರ್ಯ ನಿರ್ವಹಿಸಬೇಕೆಂಬ ನಿಯಮಾವಳಿಗಳಿವೆ. ಇದನ್ನು ಪ್ರತಿ ಜಿಲ್ಲೆಯ ಕುಪ್ಮಾದ ಘಟಕಗಳು ಪಾಲಿಸಬೇಕಾಗುತ್ತದೆ. ಈ ನಿಯಮಾವಳಿ ಪ್ರಕಾರ ಜಿಲ್ಲಾವಾರು ಚುನಾವಣೆ ನಡೆಸಿ ಪದಾಕಾರಿಗಳ ಆಯ್ಕೆ ಹಾಗೂ ಸಭೆಯನ್ನು ನಡೆಸಿ ತೀರ್ಮಾನ ಕೈಗೊಳ್ಳುವುದೇ ಈ ಕಿರುಹೊತ್ತಗೆಯ ಉದ್ದೇಶವಾಗಿದೆ ಎಂದು ಮೋಹನ್ ಆಳ್ವ ಹೇಳಿದರು.












