ಉಡುಪಿ: ಜಿಲ್ಲೆಯಲ್ಲಿ ಅತಿವೃಷ್ಠಿ, ನೈಸರ್ಗಿಕ ವಿಕೋಪಗಳು ಉಂಟಾದಾಗ ಕೂಡಲೇ ಸ್ಪಂದಿಸಿ, ಪರಿಹಾರ
ಕಾರ್ಯಗಳನ್ನು ಕೈಗೊಂಡು ಹಾನಿಗೊಳಗಾದವರಿಗೆ ನಷ್ಟ ಪರಿಹಾರವನ್ನು ಆದಷ್ಟು ತ್ವರಿತವಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕೆಸ್ವಾನ್ ವೀಡಿಯೋ ಕಾನ್ಫ್ರೆನ್ಸ್ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಪ್ರಸ್ತುತ ವರ್ಷದಲ್ಲಿ ಈವರೆಗೆ ವಾಡಿಕೆಗೆ 1959 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 2803 ಮಿ.ಮೀ ನಷ್ಟು ಮಳೆಯಾಗಿ ಶೇ. 43 ರಷ್ಟು ಹೆಚ್ಚು ಆಗಿದೆ. ಮುಂಬರುವ ದಿನಗಳಲ್ಲಿಯೂ ಸಹ ಹೆಚ್ಚು ಮಳೆಯಾಗಬಹುದೆಂಬ ಮುನ್ಸೂಚನೆಯನ್ನು ಈಗಾಗಲೇ ಹವಾಮಾನ ಇಲಾಖೆಯವರು ನೀಡಿದ್ದಾರೆ. ಹವಾಮಾನ ಇಲಾಖೆ ಪ್ರತಿದಿನವೂ ನೀಡುವ ಮುನ್ಸೂಚನೆಗಳನ್ನು ಸಾರ್ವಜನಿಕರಿಗೆ ಹಾಗೂ
ಮೀನುಗಾರರಿಗೆ ಮಾಹಿತಿ ನೀಡಬೇಕು. ಇದರಿಂದಾಗಿ ಆಗುವ ಮಾನವ ಜೀವಹಾನಿ ಹಾಗೂ ಪ್ರಾಣಿಗಳ ಜೀವಹಾನಿಯನ್ನು ತಪ್ಪಿಸಲು ಸಾಧ್ಯ ಎಂದರು.
ಹೆಚ್ಚಿನ ಮಳೆಯಿಂದಾಗಿ ಮೂಲಸೌಕರ್ಯಗಳಾದ ರಾಜ್ಯಹೆದ್ದಾರಿ 9.8 ಕಿ.ಮೀ., ಜಿಲ್ಲಾ ಮುಖ್ಯ ರಸ್ತೆಗಳು 15 ಕಿ.ಮೀ ಹಾಗೂ 904.70 ಕಿ.ಮೀ ನಷ್ಟು ಗ್ರಾಮೀಣ ರಸ್ತೆಗಳು ಸೇರಿದಂತೆ 24 ಸೇತುವೆಗಳು ಹಾಳಾಗಿವೆ. 30 ಕ್ಕೂ ಹೆಚ್ಚು ಶಾಲೆ, ಅಂಗನವಾಡಿ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳ ಕಟ್ಟಡಗಳು ಹಾನಿ ಉಂಟಾಗಿವೆ. ಇವುಗಳ ದುರಸ್ಥಿಗೆ ಅಗತ್ಯವಿರುವ ಅಂದಾಜು ನಷ್ಟವನ್ನು ಕ್ರೋಢೀಕರಿಸಿ ನೀಡಬೇಕೆಂದರು.
ಶಾಲಾ ಕಟ್ಟಡ ಹಾಗೂ ಕೊಠಡಿಗಳ ಸದೃಢತೆಯ ಬಗ್ಗೆ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಲಾಖೆಗಳ ಅಭಿಯಂತರರು, ಶಿಕ್ಷಣ ಇಲಾಖೆ ಅಧಿಕಾರಿಗಳು ಜಂಟಿ ಪರಿಶೀಲನೆ ಮಾಡಿ, ಸುರಕ್ಷತಾ ಪ್ರಮಾಣ ಪತ್ರವನ್ನು ಪಡೆಯಬೇಕು. ಒಂದೊಮ್ಮೆ ಶಾಲಾ ಕೊಠಡಿಗಳು
ಶಿಥಿಲಾವಸ್ಥೆಯಲ್ಲಿದ್ದಲ್ಲಿ ಬಳಕೆಗೆ ಯೋಗ್ಯವಿಲ್ಲದಿದ್ದಲ್ಲಿ ಅಂತಹ ಕೊಠಡಿಗಳಲ್ಲಿ ತರಗತಿಗಳನ್ನು ನಡೆಸದೇ ಬದಲೀ ವ್ಯವಸ್ಥೆಯನ್ನು
ಮಾಡಬೇಕು. ಶಾಲಾ ವಿದ್ಯಾರ್ಥಿಗಳು ಅಂತಹ ಕಟ್ಟಡಗಳ ಬಳಿ ಹೋಗದಂತೆ ಮುಂಜಾಗ್ರತೆ ಕ್ರಮವಹಿಸಬೇಕೆಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದರು.
ಸ್ವರ್ಣಾ ನದಿಗೆ ಬಜೆ ಹತ್ತಿರ ನಿರ್ಮಿಸಲಾಗಿರುವ ಡ್ಯಾಂ ನಲ್ಲಿ ಬಿರುಕು ಉಂಟಾಗಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬರುತ್ತಿದೆ.ಕೂಡಲೇ ಈ ಬಗ್ಗೆ ಪರಿಶೀಲನೆ ಮಾಡಿ, ವರದಿ ನೀಡಬೇಕು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಕಾಲುಸಂಕಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ಈಗಾಗಲೇ 5 ಕೋಟಿ
ಅನುದಾನವನ್ನು ಬಿಡುಗಡೆ ಮಾಡಿದೆ. ಈ ಸಂಬಂಧ ಟೆಂಡರ್ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದರ ಜೊತೆಗೆ
ಕಾಮಗಾರಿಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆಯ ಅಭಿಯಂತರರುಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಯಾವುದೇ ರಸ್ತೆ ಸೇರಿದಂತೆ ಮತ್ತಿತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಮಣ್ಣು ಕುಸಿತಗಳು ಉಂಟಾಗದಂತೆ ಅಗತ್ಯವಿರುವ ಮುನ್ನಚ್ಚರಿಕಾ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದ ಅವರು, ಖಾಸಗಿಯವರು ಮನೆಗಳನ್ನು ನಿರ್ಮಾಣ ಮಾಡುವಾಗಲೂ ಸಹ ಮಣ್ಣು ಕುಸಿತ ಉಂಟಾಗುವ ಸಾಧಕ-ಬಾಧಕಗಳನ್ನು ನೋಡಿ, ಅನುಮತಿ ನೀಡಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆಯ ಶಿರೂರಿನಿಂದ ಹೆಜಮಾಡಿಯ ವರೆಗೆ ಕಡಲಕೊರೆತ ಉಂಟಾಗುವ ಸಂಭವ ಪ್ರದೇಶಗಳನ್ನು ಈಗಾಗಲೇ ಗುರುತಿಸಲಾಗಿದೆ. ಕಡಲಕೊರೆತ ತಡೆಯ ಕಾಮಗಾರಿಗಳನ್ನು ಇಲಾಖಾ ವತಿಯಿಂದಲೇ ಕಲ್ಲುಕೋರೆಗಳ ಅನುಮತಿ ಪಡೆದು ಕಾಮಗಾರಿಗಳನ್ನು ಕೈಗೊಂಡಲ್ಲಿ ಹೆಚ್ಚು ಪ್ರದೇಶದಲ್ಲಿ ಕಲ್ಲುತಡೆಗೋಡೆಗಳನ್ನು
ರಚಿಸಲು ಸಾಧ್ಯ. ಇದಕ್ಕೆ ಒತ್ತು ನೀಡಬೇಕೆಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ, ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು, ಹಾಗೂ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಮಟ್ಟದ ಅಧಿಕಾರಿಗಳು ವೀಡಿಯೋ ಕಾನ್ಫ್ರೆನ್ಸ್ ಮೂಲಕ ಭಾಗವಹಿಸಿದ್ದರು.












