ಗಂಗೊಳ್ಳಿ ದೋಣಿ ದುರಂತ; ಓರ್ವ ಮೀನುಗಾರನ ಮೃತದೇಹ ಪತ್ತೆ

ಉಡುಪಿ: ಗಂಗೊಳ್ಳಿ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ಪೈಕಿ ಒಬ್ಬರ ಮೃತದೇಹ ಇಂದು ಬೆಳಗಿನ ಜಾವ ಪತ್ತೆಯಾಗಿದೆ.ಗಂಗೊಳ್ಳಿ ಬಂದರಿನಿಂದ ಜು.15 ರಂದು ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ದೋಣಿಯು ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ಮಗುಚಿದ್ದು, ನಾಲ್ವರ ಪೈಕಿ ಓರ್ವ ಮೀನುಗಾರ ಈಜಿ ದಡ ಸೇರಿದ್ದರು, ಮೂವರು ಮೀನುಗಾರರು ನಾಪತ್ತೆಯಾಗಿದ್ದರು.

ನಿರಂತರ ಶೋಧ ಕಾರ್ಯದಲ್ಲಿ ಲೋಹಿತ್ ಖಾರ್ವಿ(38) ಎಂಬವರ ಮೃತದೇಹ ಕೋಡಿ ಲೈಟ್ ಹೌಸ್ ಬಳಿಯ ಸಮುದ್ರ ತೀರದಲ್ಲಿ ಬುಧವಾರ ಬೆಳಗಿನ ಜಾವ ಪತ್ತೆಯಾಗಿದೆ. ನಾಪತ್ತೆಯಾದ ಇನ್ನಿಬ್ಬರು ಮೀನುಗಾರರಾದ, ಜಗನ್ನಾಥ ಖಾರ್ವಿ, ಸುರೇಶ್ ಖಾರ್ವಿ ಸುಳಿವು ಲಭ್ಯವಾಗಿಲ್ಲ. ಶೋಧ ಕಾರ್ಯ ಮುಂದುವರೆದಿದೆ.