ಕುಂದಾಪುರ: ಮೂಡ್ಲಕಟ್ಟೆ ಐಎಂಜೆ ಸಮೂಹ ವಿದ್ಯಾಸಂಸ್ಥೆಗಳ ಅಡಿಯಲ್ಲಿ ಬರುವ ವಿದ್ಯಾ ಅಕಾಡೆಮಿ ಶಾಲೆಯಲ್ಲಿ ಪೋಷಕರಿಗಾಗಿ ಓರಿಯಂಟೇಷನ್ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವು ಪೋಷಕರಿಗೆ ಮಕ್ಕಳ ಬೆಳೆವಣಿಗೆ, ಭಾವನಾತ್ಮಕ ಚಟುವಟಿಕೆಗಳು ಹಾಗೂ ಶೈಕ್ಷಣಿಕ ಪ್ರಗತಿಯ ಬಗ್ಗೆ ಸ್ಪಷ್ಟ ಅರಿವನ್ನು ನೀಡುವ ಗುರಿಯನ್ನು ಹೊಂದಿತ್ತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಮಾನಸಿಕ ಆರೋಗ್ಯ ಸಲಹೆಗಾರರಾಗಿ ಸೇವೆ ನೀಡುತ್ತಿರುವ ಗಿರೀಶ್ ಎಂ ಎನ್ ಅವರು ಭಾಗವಹಿಸಿದ್ದರು. ಅವರು ಮಕ್ಕಳಲ್ಲಿ ಕಂಡುಬರುವ ಆತ್ಮವಿಶ್ವಾಸದ ಕೊರತೆ, ಒತ್ತಡ, ತಂತ್ರಜ್ಞಾನದ ಇತಿಮಿತಿಯ ಬಳಕೆ ಮುಂತಾದ ಸಮಸ್ಯೆಗಳ ಬಗ್ಗೆ ಮನೋವೈಜ್ಞಾನಿಕವಾಗಿ ವಿಶ್ಲೇಷಿಸಿದರು. ಪೋಷಕರು ಮಕ್ಕಳ ಭಾವನೆಗಳನ್ನು ಗುರುತಿಸುವುದು, ಸಹಾನುಭೂತಿಯಿಂದ ವರ್ತಿಸುವುದು ಮತ್ತು ಉತ್ತಮ ಮಾರ್ಗದರ್ಶನ ನೀಡುವುದು ಹೇಗೆ ಎಂಬುದರ ಕುರಿತು ಉದಾಹರಣೆಗಳ ಸಹಿತ ಸಲಹೆಗಳನ್ನು ನೀಡಿದರು.
ಐಎಂಜೆ ಇನ್ಸ್ಟಿಟ್ಯೂಷನ್ಸ್ ಬ್ರಾಂಡ್ ಬಿಲ್ಡಿಂಗ್ ಡೈರೆಕ್ಟರ್ ಡಾ. ರಾಮಕೃಷ್ಣ ಹೆಗಡೆ ಅವರು ಮಾತನಾಡುತ್ತಾ, ಇಂದಿನ ಪೋಷಕರಿಗೆ ಇಂತಹ ಸಂವಾದಗಳು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು. ಉತ್ತಮ ಶಿಕ್ಷಣ ಮತ್ತು ಮಕ್ಕಳ ಸಮಗ್ರ ಬೆಳವಣಿಗೆಯನ್ನು ನೀಡುವತ್ತ ವಿದ್ಯಾ ಅಕಾಡೆಮಿ ಸದಾ ಮುಂದಿರುವುದಾಗಿ ಅವರು ಹೇಳಿದರು.
ಶಾಲೆಯ ನಿರ್ವಹಣಾಧಿಕಾರಿ ಶ್ರೀಮತಿ ಪಾವನ ಮಹೇಶ್ ಅವರು ಶಾಲೆಯ ಶಿಸ್ತು, ನಿಯಮಗಳು ಹಾಗೂ ದೈನಂದಿನ ಚಟುವಟಿಕೆಗಳ ಕುರಿತು ಪೋಷಕರಿಗೆ ಮಾರ್ಗದರ್ಶನ ನೀಡಿದರು.
ಶಾಲೆಯ ಎಲ್ಲಾ ಶಿಕ್ಷಕ ಮತ್ತು ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂವಾದವು ಪೋಷಕರ ಮನದಲ್ಲಿ ಸ್ಪಷ್ಟತೆ, ನಂಬಿಕೆ ಮತ್ತು ಪ್ರೇರಣೆಯನ್ನು ತುಂಬಿದ ಮಹತ್ವದ ಕ್ಷಣವಾಯಿತು.












