ಮಂಗಳೂರು: ಧರ್ಮಸ್ಥಳದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯ ಭಟ್ ನಾಪತ್ತೆ ಪ್ರಕರಣದ ಬಗ್ಗೆ ಅವರ ಹೆತ್ತವರು ದೂರು ನೀಡಿದ್ದಾರೆ. ದೂರಿನ ಬಗ್ಗೆ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ತಿಳಿಸಿದ್ದಾರೆ.
2003ನೇ ಇಸವಿಯಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಅನನ್ಯ ಭಟ್ ಕಣ್ಮರೆಯಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸುವಂತೆ ಯುವತಿಯ ತಾಯಿ ಜುಲೈ 15ರಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆಗಮಿಸಿ ದೂರು ನೀಡಿದ್ದಾರೆ. ಈ ದೂರಿನ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಪ್ರಕಟನೆ ತಿಳಿಸಿದೆ.
ಮೃತದೇಹದ ಅಸ್ಥಿ ಸಿಕ್ಕಿದರೆ ಹಿಂದೂ ಧರ್ಮದ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ: ಸಾಯುವುದಕ್ಕಿಂತ ಮೊದಲು ಮಗಳ ಮೃತದೇಹದ ಅಸ್ಥಿ ಏನಾದರೂ ದೊರೆತರೆ, ಸನಾತನ ಹಿಂದೂ ಧರ್ಮದ ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ ನಡೆಸುವ ಆಲೋಚನೆಯಲ್ಲಿ ಹೊರಟಿರುವೆನು. ನನಗೆ ಈಗ ಬೇರೆ ಏನು ಉಳಿದಿಲ್ಲ. ಮಗಳು ನಾಪತ್ತೆ ಪ್ರಕರಣದಲ್ಲಿ ನ್ಯಾಯ ದೊರಕಬೇಕು ಎಂದು ತಾಯಿ ಸುಜಾತ ಭಟ್ ತಿಳಿಸಿದ್ದಾರೆ.
ಅನನ್ಯಾ ನಾಪತ್ತೆ ಪ್ರಕರಣದ ಬಗ್ಗೆ ದೂರು ನೀಡುವ ಕಾರಣಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿಯನ್ನು ಭೇಟಿಯಾಗಿದ್ದೇವೆ. ಅವರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಸುಜಾತ ಭಟ್ ಪರ ವಕೀಲರಾದ ಮಂಜುನಾಥ್ ಎನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.












