ಉಡುಪಿ: ಅಪ್ರಾಪ್ತ ಬಾಲಕಿಗೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೊ ಆರೋಪಿಯೋರ್ವ ಸ್ಥಳ ಮಹಜರು ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಯ ಎರಡು ಕಾಲುಗಳಿಗೆ ಲಾಠಿಯಿಂದ ಏಟು ಕೊಟ್ಟು ಆತನನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.ಹಲ್ಲೆಗೆ ಒಳಗಾಗಿರುವ ಮಹಿಳಾ ಠಾಣೆಯ ಪೊಲೀಸ್ ಸಿಬ್ಬಂದಿ ರಿತೇಶ್ ಹಾಗೂ ಪೊಲೀಸರ ಲಾಠಿ ಏಟಿನಿಂದ ಗಾಯಗೊಂಡಿರುವ ಪೊಕ್ಸೋ ಆರೋಪಿ ಉತ್ತರ ಪ್ರದೇಶ ಮೂಲದ ಮಣಿಪಾಲ ವಿ.ಪಿ.ನಗರದ ನಿವಾಸಿ ಮುಹಮ್ಮದ್ ದಾನಿಶ್(29)ನನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಒಳರೋಗಿಗಳಾಗಿ ದಾಖಲಿಸಲಾಗಿದೆ.
ಉಡುಪಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಂ ಶಂಕರ್, ಪೊಲೀಸ್ ಸಿಬ್ಬಂದಿಯ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್.ನಾಯ್ಕ್, ಡಿವೈಎಸ್ಪಿ ಪ್ರಭು ಡಿ.ಟಿ., ಮಹಿಳಾ ಪೊಲೀಸ್ ಠಾಣೆಯ ನಿರೀಕ್ಷಕ ರಾಮಚಂದ್ರ ನಾಯಕ್ ಹಾಜರಿದ್ದರು.
ಮಾಧ್ಯಮದವರೊಂದಿಗೆ ಮಾತನಾಡಿದ ಎಸ್ಪಿ ಹರಿರಾಂ ಶಂಕರ್ ಅವರು, ಜು.8ರಂದು ಎಂಟು ವರ್ಷ ಪ್ರಾಯದ ಬಾಲಕಿಯ ಮೇಲೆ ಆರೋಪಿಗಳು ಮಣಿಪಾಲದ ಟ್ಯಾಪ್ಮಿ ರಸ್ತೆಯ ಹಾಡಿಯಲ್ಲಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಜು.11ರಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಆರೋಪಿಗಳಾದ ಉತ್ತರ ಪ್ರದೇಶ ಮೂಲದ ದಾನಿಶ್, ಶಾಮಿ, ಮೌಸೀನ್ ಹಾಗೂ ಅಬಿದಾ ಎಂಬವರನ್ನು ಪೊಲೀಸರು ಜು.12ರಂದು ಬಂಧಿಸಿರುವುದಾಗಿ ತಿಳಿಸಿದರು.
ಬಳಿಕ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು, ಪ್ರಮುಖ ಆರೋಪಿ ದಾನಿಶ್ ನನ್ನು ಮಹಜರು ನಡೆಸಲು ಘಟನಾ ಸ್ಥಳ ಮಣಿಪಾಲ ತಾಂಗೋಡು ಎರಡನೇ ಕ್ರಾಸ್‌ನ ಹಾಡಿ ಬಳಿ ಪೊಲೀಸರು ಕರೆದು ಕೊಂಡು ಹೋಗಿದ್ದರು. ಸ್ಥಳವನ್ನು ಪಂಚನಾಮೆ ಮಾಡುವ ವೇಳೆ ದಾನಿಶ್, ಆತನಿಗೆ ಕೈಕೊಳ ಹಿಡಿದು ಕೊಂಡಿದ್ದ ಸಿಬ್ಬಂದಿ ರಿತೇಶ್ ಎದೆಗೆ ಕೈಗಳಿಂದ ಗುದ್ದಿ ದೂಡಿ ನೆಲಕ್ಕೆ ಬೀಳಿಸಿ, ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿಹಾಕಲು ಯತ್ನಿಸಿದ್ದು, ಈ ವೇಳೆ ಪೊಲೀಸ್ ನಿರೀಕ್ಷಕರ ರಾಮಚಂದ್ರ ನಾಯಕ್ ತಡೆದಿದ್ದು, ಅವರ ಮೇಲು ಹಲ್ಲೆ ನಡೆಸಲು ಮುಂದಾದನು. ಆ ಸಂದರ್ಭ ಲಾಠಿಯಿಂದ ಆತನ ಕಾಲಿಗೆ ಹೊಡೆದು ನಿಯಂತ್ರಿಸಲಾಯಿತು. ಬಳಿಕ ಉಳಿದ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದುಕೊಂಡರು ಎಂದು ಅವರು ತಿಳಿಸಿದ್ದಾರೆ.
ಅಬಿದಾ ತನ್ನ ಸಂಬಂಧಿ ಜೊತೆಗಿನ ವೈಯಕ್ತಿಕ ದ್ವೇಷಕ್ಕೆ ಸೇಡು ತೀರಿಸಿಕೊಳ್ಳಲು ಆರೋಪಿಗಳ ಮೂಲಕ ಮಗುವಿಗೆ ಲೈಂಗಿಕ ದೌರ್ಜನ್ಯ ಎಸಗುವಂತೆ ಮಾಡಿದ್ದಾರೆ. ಆರೋಪಿ ಅಬಿದಾ ಮತ್ತು ದಾನಿಶ್ ಮಧ್ಯೆ ಅಕ್ರಮ ಸಂಬಂಧ ಇತ್ತು. ಈ ಸಂಬಂಧ ಮಗುವಿನ ತಾಯಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದು ಗಂಭೀರ ಪ್ರಕರಣವಾಗಿರುವುದರಿಂದ ಎಲ್ಲ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸಲಾಗುತ್ತದೆ ಎಂದು ಎಸ್ಪಿ ತಿಳಿಸಿದ್ದಾರೆ.












