ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಿಷಯದಲ್ಲಿ ಯಾವುದೇ ರಾಜಕೀಯ ಬೇಡ: ಪ್ರಮೋದ್ ರೈ ಪಳಜೆ

ಉಡುಪಿ: ಪೆರ್ಡೂರು ಶ್ರೀಅನಂತಪದ್ಮನಾಭ ದೇವಸ್ಥಾನದ ನಗಾರಿ ಗೋಪುರದ ಪುನರ್ ನಿರ್ಮಾಣಕ್ಕೆ ಪ್ರಾರಂಭಿಕ ಹಂತದ ಶಿಲಾನ್ಯಾಸ ಕಾರ್ಯ ಕ್ರಮವನ್ನು ಜು.13ರಂದು ನಡೆಸಲು ಉದ್ದೇಶಿಸಲಾಗಿದ್ದು, ಇದರಲ್ಲಿ ಭಕ್ತಾದಿ ಗಳು ಯಾವುದೇ ರಾಜಕೀಯ ದುರುದ್ದೇಶಗಳನ್ನು ಇಟ್ಟುಕೊಳ್ಳದೇ ಪಾಲ್ಗೊಳ್ಳ ಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಆದೇಶದಂತೆ ನಗಾರಿ ಗೋಪುರ ತೆರವು:
ದೇವಸ್ಥಾನದ ನಗಾರಿ ಉಪ್ಪರಿಗೆಯು ಶಿಥಿಲಾವಸ್ಥೆಯಲ್ಲಿರುವುದನ್ನು ದೇವಳದ ವ್ಯವಸ್ಥಾಪನಾ ಸಮಿತಿಯು ಮನಗಂಡಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಥವಾ ಬೇರೆಯವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಹಾಗೂ ಭಕ್ತರು ಮನವಿ ಮಾಡಿಕೊಂಡ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗೆ ಈ ವಿಚಾರದ ಬಗ್ಗೆ ಸೂಕ್ತ ವರದಿಯನ್ನು ಸಲ್ಲಿಸಲಾಗಿದೆ. ಆ ನಿಟ್ಟಿನಲ್ಲಿ ಅಪಾಯಕಾರಿ ನಗಾರಿ ಉಪ್ಪರಿಗೆಯನ್ನು ತೆರವುಗೊಳಿ ಸುವಂತೆ ಜಿಲ್ಲಾಧಿಕಾರಿಗಳು ನೀಡಿದ ಆದೇಶದಂತೆ ಎಲ್ಲರನ್ನು ಸೇರಿಸಿಕೊಂಡು ನಗಾರಿ ಗೋಪುರದ ತೆರವುಗೊಳಿಸುವ ಕಾರ್ಯವನ್ನು ಶ್ರಮದಾನದ ಮೂಲಕ ಮಾಡಿದ್ದೇವೆ.

ಈ ನಗಾರಿ ಗೋಪುರದ ಪುನರ್ ನಿರ್ಮಾಣಕ್ಕೆ ಬೇಕಾದ ನಕ್ಷೆ ಮತ್ತು ವಿನ್ಯಾಸವನ್ನು ತಯಾರಿಸಿಕೊಂಡು ಇಲಾಖೆಯ ಒಪ್ಪಿಗೆಯನ್ನು ಜು.13ರಂದು ಕೆಲಸದ ಪ್ರಾರಂಭಿಕ ಹಂತದ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಲು ಪೂರ್ಣ ತಯಾರಿಯನ್ನು ಮಾಡಲಾಗಿದೆ. ಈ ಮಧ್ಯೆ ಜೂ.30ರಂದು ಸುರೇಶ್ ಸೇರ್ವೆಗಾರ್, ಲಾಲಾಜಿ ಮೆಂಡನ್, ಸುರೇಶ್ ನಾಯಕ್, ಮಟ್ಟಾರು ರತ್ನಾಕರ ಹೆಗ್ಡೆ, ಜಿಯಾನಂದ ಹೆಗ್ಡೆ, ವಿದ್ಯಾಧರ ಶೆಟ್ಟಿ, ಸುಧಾಕರ ಶೆಟ್ಟಿ, ದೇವು ಪೂಜಾರಿ, ಶಂಭು ಶಂಕರ ಶೆಟ್ಟಿ ಇವರು ಜಿಲ್ಲಾಧಿಕಾರಿಗಳ ಆದೇಶಕ್ಕೆ ಮತ್ತು ಜು.13ರ ಸಮಾರಂಭಕ್ಕೆ ತಡೆ ಕೋರಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ. ಅದರಂತೆ ನ್ಯಾಯಾಲಯವು ತಾತ್ಕಾಲಿಕವಾಗಿ ಯಥಾಸ್ಥಿತಿ ಕಾಪಾಡುವಂತೆ ಆದೇಶವನ್ನು ನೀಡಿತ್ತು.

ಈ ಆದೇಶವನ್ನು ರದ್ದುಗೊಳಿಸಬೇಕೆಂದು ಕೋರಿ ವ್ಯವಸ್ಥಾಪನಾ ಸಮಿತಿಯು ಹೈಕೋರ್ಟ್‌ಗೆ ಮನವಿಯನ್ನು ಸಲ್ಲಿಸಲಾಗಿದ್ದು, ನಿರಂತರ ಮೂರು ದಿನಗಳ ವಾದ-ಪ್ರತಿವಾದಗಳು ನಡೆದು ಜು.8ರಂದು ನ್ಯಾಯಾಲಯವು ಶಿಲಾನ್ಯಾಸ ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿ ಇಲ್ಲವೆಂದು ಹಾಗೂ ದೇವರ ಭಕ್ತ ರೆಲ್ಲರೂ ಸೇರಿ ಶಿಲಾನ್ಯಾಸ ಕಾರ್ಯಕ್ರಮವನ್ನು ನಡೆಸಬೇಕೆಂದು ಸೂಚಿಸಿ ಮಧ್ಯಂತರ ಆದೇಶ ಹೊರಡಿಸಿದೆ ಎಂದು ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆ ತಿಳಿಸಿದ್ದಾರೆ.