ವಿದೇಶಿ ಉದ್ಯೋಗ ವಂಚನೆ ಪ್ರಕರಣ: ಆರೋಪಿಗಳ ವಿರುದ್ಧ KCOCA ಪ್ರಕರಣ ದಾಖಲಿಸಲು ಸಿದ್ದತೆ; ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ

ಮಂಗಳೂರು: ವಿದೇಶದಲ್ಲಿ ಉದ್ಯೋಗದ ವೀಸಾ ಕೊಡಿಸುವುದಾಗಿ ಆಮಿಷವೊಡ್ಡಿ ಮಂಗಳೂರಿ ನಲ್ಲಿ 300 ಮಂದಿ ಉದ್ಯೋಗ ಆಕಾಂಕ್ಷಿಗಳಿಂದ ಕೋಟ್ಯಂತರ ರೂ. ಪಡೆದು ವಂಚಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಗಳ ವಿರುದ್ಧ ಕೆ-ಕೋಕಾ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಆ್ಯಕ್ಟ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ನಗರದ ಬೆಂದೂರ್‌ವೆಲ್‌ನಲ್ಲಿ ಹೈರ್‌ಗ್ಲೋ ಎಲಿಗೆಂಟ್ ಓವರ್‌ಸೀಸ್ ಇಂಟರ್‌ನ್ಯಾಷನಲ್ ಪ್ರೈ.ಲಿ. ಎಂಬ ಹೆಸರಿನ ಕಚೇರಿಯನ್ನು ತೆರದು ವಿದೇಶದಲ್ಲಿ ಉದ್ಯೋಗ ವೀಸಾ ಕೊಡಿಸುವುದಾಗಿ ಜಾಹೀರಾತುಗಳನ್ನು ನೀಡಿ ವಂಚನೆ ಮಾಡಿದ ಪ್ರಕರಣದಲ್ಲಿ ಮಹಾರಾಷ್ಟ್ರದ ನವಿ ಮುಂಬೈಯ ಕೋಪರಕೈರಾನೆ ನಿವಾಸಿ ದಿಲ್‌ಶಾದ್ ಅಬ್ದುಲ್ ಸತ್ತಾರ್ ಖಾನ್ (45) ಮತ್ತು ಥಾಣೆ ದೊಂಬಿವಿಲಿಯ ಸಾಹುಕಾರಿ ಕಿಶೋರ್ ಕುಮಾರ್ ಯಾನೆ ಅನಿಲ್ ಪಾಟೀಲ್ (34) ಎಂಬವರನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು.ಆರೋಪಿಗಳ ವಿರುದ್ಧ ಈಗಾಗಲೇ ನಗರದ ಬಂದರ್ ಮತ್ತು ನವಿ ಮುಂಬೈ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಎರಡು ಪ್ರಕರಣಗಳು ದಾಖಲಾಗಿರುವುದರಿಂದ ಆರೋಪಿಗಳ ವಿರುದ್ಧ ಕೆ-ಕೋಕಾ (ಕರ್ನಾಟಕ ಕಂಟ್ರೋಲ್ ಆಫ್ ಆರ್ಗನೈಸ್ಡ್ ಆ್ಯಕ್ಟ್) ಕಾಯ್ದೆಯಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

*ಕೆ-ಕೋಕಾ ಕಾಯ್ದೆಯಡಿ ಪೊಲೀಸರಿಗೆ ವಿಶೇಷ ಅಧಿಕಾರವೂ ಸಿಗುವುದರಿಂದ ಆರೋಪಿಗಳಿಗೆ ಜಾಮೀನು ಸಿಗುವುದು ಕಷ್ಟ. ಎರಡು ಪ್ರಕರಣಗಳಲ್ಲಿ ಭಾಗಿಯಾದ ಪ್ರತಿಯೊಬ್ಬರ ವಿರುದ್ಧವೂ ಕೆ-ಕೋಕಾ ಕಾಯ್ದೆಯನ್ನು ಜಾರಿಗೊಳಿಸಲು ಅವಕಾಶವಿದೆ ಎಂದು ಆಯುಕ್ತರು ತಿಳಿಸಿದ್ದಾರೆ.