ಉಡುಪಿ: ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಯುವನಿಧಿ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, ಶಿಕ್ಷಣ ಪಡೆದು ಉದ್ಯೋಗ ದೊರೆಯದೇ ಇರುವಂತಹ ಪದವೀಧರರಿಗೆ ರೂ. 3000 ಹಾಗೂ ಡಿಪ್ಲೋಮಾ ಪದವೀಧರರಿಗೆ ಪ್ರತೀ ಮಾಹೆ 1500 ರೂ. ಭತ್ಯೆಯನ್ನು ಒದಗಿಸುವ ಅಭೂತಪೂರ್ವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ನಿರುದ್ಯೋಗಿ ಯುವಕರಿಗೆ ಎರಡು ವರ್ಷಗಳವರೆಗೆ ಅಥವಾ ಎರಡು ವರ್ಷದ ಒಳಗೆ ಫಲಾನುಭವಿಗಳಿಗೆ ಉದ್ಯೋಗ ಸಿಗುವವರೆಗೆ ನಿರುದ್ಯೋಗ ಭತ್ಯೆ ಒದಗಿಸುವ ಗುರಿ ಹೊಂದಿದೆ.
ಪ್ರತಿ ವರ್ಷ ಪದವಿ ಅಥವಾ ಡಿಪ್ಲೋಮಾ ಪಡೆದು ಆರು ತಿಂಗಳು ಯಾವುದೇ ಉದ್ಯೋಗ ಹೊಂದದೇ ಅಥವಾ ಉನ್ನತ ಶಿಕ್ಷಣಕ್ಕೆ ಹೋಗದೇ ಇದ್ದವರು ಅಥವಾ ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಪದವಿ ಮತ್ತು ಡಿಪ್ಲೋಮಾ ಪೂರ್ಣಗೊಳಿಸಿದ 180 ದಿನಗಳವರೆಗೂ ಉದ್ಯೋಗ ದೊರಕದೇ ಇರುವ ನಿರುದ್ಯೋಗಿಗಳು ಸೇವಾಸಿಂಧು ಪೋರ್ಟಲ್ನಲ್ಲಿ ಯುವನಿಧಿ ಯೋಜನೆಗೆ ಹೆಸರು ನೋಂದಾಯಿಸಿ, ಈ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ.
ಯು.ಪಿ.ಎಸ್.ಸಿ, ಕೆ.ಪಿ.ಎಸ್.ಸಿ, ಎಸ್.ಎಸ್.ಸಿ ಬ್ಯಾಂಕಿAಗ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಸರ್ಕಾರಿ ಉದ್ಯೋಗವನ್ನು ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯುವ ಕನಸು ಕಂಡ ಪದವಿ ಹಾಗೂ ಡಿಪ್ಲೋಮಾ ಪಡೆದ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯು ಒತ್ತಾಸೆಯಾಗಿ ನಿಂತಿದ್ದು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಫರ್ಧಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಅರ್ಜಿ ಸಲ್ಲಿಸಲು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಿದ್ಧತೆಗಾಗಿ ಪುಸ್ತಕಗಳನ್ನು ಖರೀದಿಸಲು
ಟ್ಯೂಟೆರಿಯಲ್ಗಳಲ್ಲಿ ತರಬೇತಿ ಪಡೆಯಲು ಆರ್ಥಿಕ ಅವಶ್ಯಕತೆಯಿದ್ದು, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯುವನಿಧಿ ಯೋಜನೆಯ ಮೂಲಕ ನೀಡುವ ನಿರುದ್ಯೋಗ ಭತ್ಯೆಯ ಹಣವು ಅಂತಹವರಿಗೆ ಸದುಪಯೋಗವಾಗುತ್ತಿದೆ.
ರಾಜ್ಯದಲ್ಲಿ ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿ ಹಾಗೂ ಡಿಪ್ಲೋಮಾ ಪಡೆದಿದ್ದಾರೆ. ಅವರಲ್ಲಿ ಬಹಳಷ್ಟು
ಜನರು ಉದ್ಯೋಗದತ್ತ, ಉನ್ನತ ಶಿಕ್ಷಣಕ್ಕೆ ಮಾಡಿದ್ದಾರೆ. ಉಳಿದ ಒಂದೂವರೆ ಲಕ್ಷ ಯುವಜನರು ಯುವನಿಧಿ ಯೋಜನೆಯ
ನೋಂದಾವಣೆ ಮಾಡಿಕೊಂಡಿದ್ದಾರೆ. ಈ ಯೋಜನೆಯಡಿ ನೋಂದಾಯಿತರಿಗೆ ನಿರುದ್ಯೋಗ ಭತ್ಯೆ ನೀಡಲಷ್ಟೇ ಸೀಮಿತವಾಗಿಲ್ಲ.
ನೋಂದಾಯಿತ ಅರ್ಹರಿಗೆ ಮಾಸಾಶನದ ಜೊತೆಗೆ ಕೌಶಲ್ಯ ಅಭಿವೃದ್ಧಿ ತರಬೇತಿಗಳಾದ ಸಂವಹನ ಕೌಶಲ್ಯ, ಭಾಷೆ ಪ್ರಬುದ್ಧತೆ, ಸಂದರ್ಶನ ನಿಭಾಯಿಸುವುದು, ಕಂಪ್ಯೂಟರ್ ತರಬೇತಿ ನೀಡಿ ನಿರುದ್ಯೋಗಿ ಯುವಜನರನ್ನು ಉದ್ಯೋಗದ ಪಥಕ್ಕೆ ತಯಾರು ಮಾಡುತ್ತಿದೆ.ಆಧುನಿಕತೆಯ ನಾವೀನ್ಯತೆಯ ಉದ್ಯೋಗ ಅವಕಾಶಗಳಿಗೆ ತಕ್ಕಂತೆ ಮಾನವ ಸಂಪನ್ಮೂಲವನ್ನು ಅಭಿವೃದ್ಧಿಗೊಳಿಸಲು ಯುವನಿಧಿ ಯೋಜನೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ. ಇವುಗಳ ಜೊತೆಗೆ ಜಿಲ್ಲಾ ಕೇಂದ್ರಗಳಲ್ಲಿ ಉದ್ಯೋಗ ಮೇಳಗಳ ಮೂಲಕ ಉದ್ಯೋಗಾವಕಾಶಗಳನ್ನು ಒದಗಿಸುವುದು, ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಿ, ಮಾರುಕಟ್ಟೆಗೆ ಅಗತ್ಯವಾದ ಮಾನವ ಸಂಪನ್ಮೂಲ ಸೃಷ್ಠಿಸುವುದು ರಾಜ್ಯ ಸರ್ಕಾರದ ಗುರಿಯಾಗಿದೆ.
ಪಂಚ ಗ್ಯಾರಂಟಿಗಳಲ್ಲಿ ಒಂದಾದ ಈ ಯುವನಿಧಿ ಯೋಜನೆಯು 2024 ರ ಜನವರಿ 12 ರಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಇತರೆ ಸಹದ್ಯೋಗಿ ಸಚಿವರುಗಳನ್ನೊಳಗೊಂಡಂತೆ ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಿದರು.
ನಿರುದ್ಯೋಗ ಭತ್ಯೆಯಿಂದ ಪದವಿ ಅಥವಾ ಡಿಪ್ಲೋಮಾ ಪಡೆದ ಯುವಜನರುಗಳು ತಮ್ಮ ಪೋಷಕರಿಗೆ ಆಗುತ್ತಿರುವ ಆರ್ಥಿಕ
ಹೊರೆಯನ್ನು ತಗ್ಗಿಸುವುದರ ಜೊತೆಗೆ ಯುವಜನರ ಆತ್ಮವಿಶ್ವಾಸವನ್ನು ದ್ವಿಗುಣಗೊಳಿಸಿ, ಸ್ವಾಭಿಮಾನ ಹೆಚ್ಚಿಸಿದೆ.
ಪದವಿ ಅಥವಾ ಡಿಪ್ಲೋಮಾ ಪಡೆದವರು ಉದ್ಯೋಗ ಅವಕಾಶ ಕಡಿಮೆ ಇರುವ ಈ ದಿನಗಳಲ್ಲಿ ರಾಜ್ಯ ಸರ್ಕಾರ ಯುವ ಜನತೆಯ
ಯೌವನದ ದಿನಗಳಲ್ಲಿ ಆರ್ಥಿಕ ಮುಗ್ಗಟ್ಟು ಉಂಟಾಗಿ ನಿರಾಸೆ ಉಂಟಾಗದಂತೆ ಅವರ ಮುಂದಿನ ನಡೆಗೆ ಶಕ್ತಿ ತುಂಬುವ ಕಾರ್ಯವನ್ನು ಯುವ ನಿಧಿ ಯೋಜನೆಯನ್ನು ಜಾರಿಗೆ ತರುವುದರ ಮೂಲಕ ಕೈಹಿಡಿದಿದೆ.
ಯುವನಿಧಿ ಯೋಜನೆಗೆ ಫಲಾನುಭವಿಗಳ ಸಂಖ್ಯೆ ಹೆಚ್ಚಿಸಲು ಜಿಲ್ಲೆಯ ಕಾಲೇಜುಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ, ಫಲಾನುಭವಿಗಳನ್ನಾಗಿಸುವ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.ಉನ್ನತ ಶಿಕ್ಷಣ ಹಾಗೂ ಉದ್ಯೋಗಕ್ಕೆ ಹೋದರೆ ಈ ಯೋಜನೆಗೆ ಅರ್ಹರಿರುವುದಿಲ್ಲ. ಯುವನಿಧಿಗೆ ನೋಂದಾಯಿಸಿಕೊಂಡಿರುವ ಫಲಾನುಭವಿಗಳು ತಾವು ವ್ಯಾಸಾಂಗ ಮಾಡುತ್ತಿಲ್ಲ. ಸ್ವಯಂ ಉದ್ಯೋಗಿಯಲ್ಲ. ನಿರುದ್ಯೋಗಿ ಎಂದು ಪ್ರತೀ ತಿಂಗಳು ಸ್ವಯಂ ಘೋಷಣೆ
ಸಲ್ಲಿಸಬೇಕು.
ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 2023 ರ ಡಿಸೆಂಬರ್ ನಿಂದ 2025 ರ ಜನವರಿ ವರೆಗೆ ಒಟ್ಟು 2.51 ಲಕ್ಷ ಫಲಾನುಭವಿಗಳಿಗೆ 270.17 ಕೋಟಿ ರೂ. ಡಿ.ಬಿ.ಟಿ ಮೂಲಕ ಪಾವತಿಸಲಾಗಿರುತ್ತದೆ. ಜಿಲ್ಲೆಯಲ್ಲಿ 3762 ಅಭ್ಯರ್ಥಿಗಳು ನೋಂದಣಿಯಾಗಿದ್ದು, ಡಿಬಿಟಿ ಮೂಲಕ ಪ್ರತೀ ತಿಂಗಳು 5 ಕೋಟಿ 82 ಲಕ್ಷ ರೂ. ಗೂ ಹೆಚ್ಚು ಹಣ ಫಲಾನುಭವಿಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಜಿಲ್ಲಾ
ಉದ್ಯೋಗಾಧಿಕಾರಿಗಳು ತಿಳಿಸಿದ್ದಾರೆ.
1.ನಾನು ಯುವನಿಧಿ ಯೋಜನೆಯ ಫಲಾನುಭವಿಯಾಗಿದ್ದು, ಯುವ ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಮೂಲಕ ಅವರಿಗೆ ಉದ್ಯೋಗ ದೊರಕಿಸಲು ಯುವನಿಧಿ ಯೋಜನೆಯು ನೆರವಾಗುತ್ತಿದೆ. ಬಹಳಷ್ಟು ಪದವೀಧರರು ಸೂಕ್ತ ಮಾರ್ಗದರ್ಶನ ಇಲ್ಲದೆ.ಅರ್ಹತೆಯಿದ್ದರೂ ಅವಕಾಶ ಸಿಗದೆ ಇರುವ ಸಂದರ್ಭದಲ್ಲಿ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆ ಬಡ ಹಾಗೂ ಮಧ್ಯಮ ವರ್ಗದವರಿಗೂ ಬಹಳ ಅನೂಕೂಲವಾಗಿದೆ.- ಸುಶ್ಮೀರ, ಉಡುಪಿ (ಯುವನಿಧಿ ಫಲಾನುಭವಿ)

2. ಯುವನಿಧಿ ಯೋಜನೆಯಡಿ ಪದವಿ ಪಡೆದು ನಿರುದ್ಯೋಗದಲ್ಲಿರುವ ನಮ್ಮಂತಹ ವಿದ್ಯಾರ್ಥಿಗಳಿಗೆ ಪ್ರತೀ ಮಾಹೆ 3000 ರೂ. ಸ್ಟೇ ಫಂಡ್ ನೀಡುತ್ತಿರುವುದು ತುಂಬಾ ಅನುಕೂಲವಾಗಿದೆ. ಹೊರ ಜಿಲ್ಲೆಗಳಿಗೆ ಉದ್ಯೋಗ ಅರಸಿ, ಸಂದರ್ಶನಕ್ಕೆ ಹಾಜರಾಗಲು, ಉದ್ಯೋಗ ಅವಕಾಶದ ಪರೀಕ್ಷೆಗಳನ್ನು ಬರೆಯಲು ಆಗುವ ಖರ್ಚು-ವೆಚ್ಚಗಳನ್ನು ಭರಿಸಲು ತುಂಬಾ ಸಹಕಾರಿಯಾಗಿದೆ. – ಗೌತಮಿ ಎಸ್
ಕುಂದರ್: ಉಡುಪಿ (ಯುವನಿಧಿ ಫಲಾನುಭವಿ).













