ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಿಂದೂ ಸಂಘಟನೆಗಳ ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಕಾನೂನು ವಿರೋಧಿ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಸಭೆಯನ್ನು ಆಯೋಜಿಸಲಾಗಿತ್ತು.
ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರಕಾರದ ಕ್ರಮದ ವಿರುದ್ಧ ದಿಕ್ಕಾರ ಕೂಗಿದರು.ವಿಶ್ವ ಹಿಂದೂ ಪರಿಷತ್ ಮುಖಂಡ ಸುನಿಲ್ ಕೆ.ಆರ್ ಮಾತನಾಡಿ, ಲವ್ ಜಿಹಾದ್, ಗೋಹತ್ಯೆ ನಿಷೇಧ, ಮತಾಂತರ ತಡೆಗಟ್ಟಿದರಷ್ಟೇ ಶಾಂತಿ ನೆಲೆಸಲು ಸಾಧ್ಯವಿದೆ. ಅದನ್ನು ಬಿಟ್ಟು ಧರ್ಮರಕ್ಷಣೆಗಾಗಿ ಕೆಲಸ ಮಾಡುವ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡಬಾರದು ಎಂದರು.
ಕರಾವಳಿ ಗಲಭೆಯುಕ್ತ ಪ್ರದೇಶ ಎಂಬ ರೀತಿ ರಾಜ್ಯ ಸರಕಾರ ಬಿಂಬಿಸುತ್ತಿದೆ. ಹಿಂದೂ ಸಮಾಜವನ್ನು ಮುನ್ನಡೆಸುತ್ತಿರುವವರ ಮೇಲೆ ರೌಡಿಶೀಟರ್, ಗೂಂಡಾ ಕಾಯ್ದೆಗಳನ್ನು ಹಾಕುವ ಸಂಚು ಇದರ ಹಿಂದೆ ಅಡಗಿದೆ. ಈ ಮೂಲಕ ಕರಾವಳಿಯಲ್ಲಿ ಹಿಂದುತ್ವದ ಶಕ್ತಿಯನ್ನು ಧ್ವಂಸ ನಡೆಸುವ ಕೆಲಸದಲ್ಲಿ ರಾಜ್ಯ ಸರಕಾರ ನಿರತವಾಗಿದೆ. ಭಾಷಣ ಮಾಡಿದರೆ ರಾಷ್ಟ್ರೀಯತೆ ವಿಚಾರ ಪ್ರಚಾರ ಮಾಡಿದರೆ ಪ್ರಕರಣ ದಾಖಲಿಸಲಾಗುತ್ತಿದೆ. ಮನೆ-ಮನೆಗೆ ನುಗ್ಗಿ ಕಾರ್ಯಕರ್ತರನ್ನು ತಪಾಸಣೆ ಮಾಡುವ ಕೆಲಸ ನಡೆಯುತ್ತಿದೆ. ಹಿಂಜಾವೇ ಮಂಗಳೂರು ವಿಭಾಗವು ದೇಶ ಹಾಗೂ ಹಿಂದೂ ವಿರೋಧಿ ಚಟುವಟಿಕೆಗಳಿಗೆ ಪೂರ್ಣವಿರಾಮ ನೀಡುವ ಉದ್ದೇಶವನ್ನು ಹೊಂದಿದ್ದು, ಇದಕ್ಕೆ ರಾಜ್ಯ ಸರಕಾರ ತಡೆಯೊಡ್ಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರಕಾರದ ಆ್ಯಂಟಿ ಕಮ್ಯೂನಲ್ ವಿಂಗ್ ಕೇವಲ ಹಿಂದೂಗಳ ಮೇಲೆ ಮಾತ್ರ ಪ್ರಕರಣ ದಾಖಲಿಸಲು ಸೀಮಿತವಾದಂತಿದೆ. ಹಿಂದೂ ಕಾರ್ಯಕರ್ತರ ವಿರುದ್ಧ ನಿರ್ಬಂಧ ಹೇರಿದರೆ ನಾವು ಸುಮ್ಮನಿರುವುದಿಲ್ಲ. ಆಂಟಿ ಕಮ್ಯೂನಲ್ ವಿಂಗ್ ಲವ್ ಜಿಹಾದ್, ಕಸಾಯಿಖಾನೆಗಳ ವಿರುದ್ಧ ಕಾರ್ಯಾಚರಿಸಲಿ ಎಂದರು.
ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಕಿರಣ ಕುಮಾರ್ ಕೊಡ್ಗಿ, ಗುರುರಾಜ ಗಂಟಿಹೊಳೆ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಹಿಂಜಾವೆ ಪ್ರಮುಖರಾದ ಮಹೇಶ್ ಬೈಲೂರು, ವಾಸುದೇವ ಗಂಗೊಳ್ಳಿ, ದಿನೇಶ್ ಮೆಂಡನ್, ಉಮೇಶ್ ನಾಯಕ ಸೂಡ. ಉಮೇಶ್ ಶೆಟ್ಟಿ ಪಕ್ಕಾಲು, ರೇಷ್ಮಾ ಉದಯ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.












