ತುಳು ಸಂಸ್ಕೃತಿಯನ್ನು ಮಕ್ಕಳಿಗೆ ತಿಳಿಸುವ ಕಾರ್ಯವಾಗಬೇಕು- ಪೂರ್ಣಿಮಾ

ಉಡುಪಿ: ಉಡುಪಿ ತುಳುಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಮತ್ತು ತುಳುನಾಡ ಧ್ವನಿ ತುಳು ಅಂತರ್ಜಾಲ ಪತ್ರಿಕೆಯ ವತಿಯಿಂದ ಉಡುಪಿಯ ಜಗನ್ನಾಥ ಸಭಾಭವನದಲ್ಲಿ ‘ಮದರೆಂಗಿದ ರಂಗ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಅವರು, ನಮ್ಮ ಹಿರಿಯರು ಆಚರಿಸಿಕೊಂಡು ಬರುತ್ತಿದ್ದ ತುಳು ಸಂಸ್ಕೃತಿಯನ್ನು ಇಂದಿನ ಮಕ್ಕಳಿಗೆ ತಿಳಿಸುವ ಕಾರ್ಯ ಅಗತ್ಯವಾಗಿ ಮಾಡಬೇಕಾಗಿದೆ ಎಂದರು.

ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ತುಳು ಸಂಸ್ಕೃತಿಯನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತುಳುನಾಡಿನ ಪ್ರಾಕೃತಿಕ ಸಂಪತ್ತನ್ನು ಮಕ್ಕಳಿಗೆ ಪರಿಚಯಿಸುವ ಕೆಲಸ ಮಾಡಬೇಕು. ತುಳು ಭಾಷೆಗೆ ಮಾನ್ಯತೆ ಸಿಗಬೇಕಾದರೆ ತುಳು ಭಾಷೆ, ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.

ಮಲ್ಪೆ ಶ್ರೀಜ್ಞಾನಜ್ಯೋತಿ ಭಜನಾ ಮಂದಿರದ ರಾಧಾಕೃಷ್ಣ ಮೆಂಡನ್, ಉದ್ಯಮಿ ಶ್ರುತಿ ಜಿ.ಶೆಣೈ, ಬೆಳಪು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಜೇಬಾ ಸೆಲ್ವಾನ್, ರೂಪದರ್ಶಿ ವಿದ್ಯಾ ಸರಸ್ವತಿ, ವೀ ಕೇರ್ ಆರ್ಗನೈಸೇಶನ್ ಸ್ಥಾಪಕಿ ರೇಷ್ಮಾ ತೋಟಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಾಟಿ ವೈದ್ಯ ಭಾಸ್ಕರ ಪೂಜಾರಿ ಹಿರಿಯಡ್ಕ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಭುವನ ಪ್ರಸಾದ್ ಹೆಗ್ಡೆ, ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ಉಪಸ್ಥಿತರಿದ್ದರು. ಸ್ಪರ್ಧೆಯ ಸಂಚಾಲಕಿ ಯಶೋಧ ಕೇಶವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೃತಿ ಮೂಡುಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ವಿದ್ಯಾರ್ಥಿಗಳಿಗೆ ಎಲೆಯಿಂದ ಪೀಂಪಿರಿ ಊದುವ, ಹಲಸಿನ ಬೀಜದ ಸಿಪ್ಪೆತೆಗೆಯುವ, ಅಂಗೈಗೆ ಮದರಂಗಿ ಇಡುವ, ತುಳುನಾಡಿನ ಕಾಡು ಮತ್ತು ನಾಡಿನಲ್ಲಿ ಸಿಗುವ ಹಣ್ಣುಗಳ ಗುರುತು ಹಿಡಿಯುವ, ತೆಂಗಿನ ಗರಿಯಲ್ಲಿ ವಸ್ತುಗಳನ್ನು ತಯಾರು ಮಾಡುವ, ಕೇಶಾಲಂಕಾರ, ತಲೆಗೆ ಮುಂಡಾಸು ಕಟ್ಟುವ, ಹೂ ಕಟ್ಟುವ, ಜಡೆಗೆ ಜಲ್ಲಿ ಬಿಡಿಸುವ, ಬತ್ತಿ ಕಟ್ಟುವ, ಹೂ ಜೋಡಣೆ, ತುಳು ಲಿಪಿಯಲ್ಲಿ ಬರೆಯುವ ಮತ್ತು ತುಳು ರಸಪ್ರಶ್ನೆ ಸ್ಪರ್ಧೆಗಳು ನಡೆದವು.